ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ಕಾರ್ಯಕಾರಿ ಆದೇಶದ ಮೂಲಕ ನೇಮಕಾತಿ ವಿಧಾನ ನಿಗದಿಪಡಿಸಲು ಸರ್ಕಾರ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಗ್ರಾಪಂ ಕಾರ್ಯದರ್ಶಿ ಗ್ರೇಡ್-2 ಆಗಿ ಗ್ರಾಮ ಪಂಚಾಯತಿ ಕೆಲಸಗಾರರ ನೇರ ನೇಮಕಾತಿ ನಿಯಮಗಳ ತಿದ್ದುಪಡಿಗೆ ಸರ್ಕಾರ ಅನುಮೋದನೆ ನೀಡಿದ್ದು, ಅವರಿಗೆ ಗ್ರಾಪಂ ಕಾರ್ಯದರ್ಶಿಗಳಾಗಲು ಅವಕಾಶ ಕಲ್ಪಿಸಲಾಗಿದೆ. ಅವರಿಗೆ ನನ್ನ ಶುಭ ಹಾರೈಕೆಗಳು. ಹಾಗೆಯೇ, ಅವರಿಗೆ ನಿಯಮಿತ ವೇತನ ಪಾವತಿ ಸೇರಿದಂತೆ ಇತರೆ ವಿಷಯಗಳ ಸರ್ಕಾರ ಗಮನಹರಿಸುತ್ತಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಅಧಿಸೂಚನೆಯ ಅನ್ವಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಲೆಕ್ಕ ಸಹಾಯಕರ ಹುದ್ದೆಗಳಿಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ನಿರ್ದಿಷ್ಟಪಡಿಸಲಾಗಿದೆ. ಹುದ್ದೆಗಳ ಮತ್ತು ನೇಮಕಾತಿ ನಿಯಮಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ತರಲಾಗಿದೆ.
ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಆರ್ಥಿಕ ಇಲಾಖೆಯ ಅಭಿಪ್ರಾಯದ ಹಿನ್ನೆಲೆಯಲ್ಲಿ ಗ್ರೇಡ್-2 ಗ್ರಾಪಂ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಗ್ರಾಮಪಂಚಾಯಿತಿಗಳ ಬಿಲ್ ಕಲೆಕ್ಟರ್/ ಗುಮಾಸ್ತರ ಹುದ್ದೆಯಿಂದ ಆಯ್ಕೆ ಮೂಲಕ ನೇರ ನೇಮಕಾತಿ ಮಾಡಬೇಕಾಗಿರುವುದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವುದೇ ನೇರ ನೇಮಕಾತಿ ಹುದ್ದೆಗಳ ಭರ್ತಿ ಮಾಡುವುದನ್ನು ತಡೆಹಿಡಿಯಲಾಗಿತ್ತು.
ಪ್ರಸ್ತುತ ಆರ್ಥಿಕ ಇಲಾಖೆ ಗ್ರಾಪಂಗಳಲ್ಲಿ ಖಾಲಿಯಿರುವ ಗ್ರಾಪಂ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕರು ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ಅವಶ್ಯಕತೆಗಳಿಗೆ ಅನುಗುಣವಾಗಿ ಗ್ರಾಪಂ ಸಿಬ್ಬಂದಿಗಳಿಂದ ಲಭ್ಯವಾಗುವ ಹುದ್ದೆಗಳನ್ನು ಆಯ್ಕೆ ಮೂಲಕ ನಿಯಮಾನುಸಾರ ತುಂಬಲು ಸಹಮತ ನೀಡಲಾಗಿದೆ.