ಬೆಳಗಾವಿ: ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಇಟ್ಟ ಘಟನೆ ಬೆಳಗಾವಿ ಜಿಲ್ಲೆಯ ಕಲಕಾಂಬ ಗ್ರಾಮದಲ್ಲಿ ನಡೆದಿದೆ.
ಕಲಕಾಂಬ ಗ್ರಾಮ ಪಂಚಾಯಿತಿ ಕಟ್ಟಡದೊಳಗೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಕಚೇರಿಯಲ್ಲಿನ ಪೀಠೋಪಕರಣಗಳು, ವಸ್ತುಗಳು ಬೆಂಕಿಗಾಹುತಿಯಗಿದೆ.
ಘಟನೆ ಬಳಿಕ ದುಷ್ಕರ್ಮಿಗಳು ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮರಾ ಕೂಡ ಕಿತ್ತುಕೊಂಡು ಹೋಗಿದ್ದಾರೆ. ಇಂದು ಬೆಳಿಗ್ಗೆ ಗ್ರಾಮ ಪಂಚಾಯಿತಿಗೆ ಅಧಿಕಾರಿಗಳು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಬಿಯರ್ ಬಾಟಲ್ ನಲ್ಲಿ ಪೆಟ್ರೋಲ್ ತುಂಬಿ ಅದಕ್ಕೆ ಬೆಂಕಿ ಹಚ್ಚಿ ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ಎಸೆಯಲಾಗಿದೆ. ಗ್ರಾಮ ಪಂಚಾಯಿತಿ ಕಿಟಕಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಲ್ಲಿದ್ದ ಪೀಠೋಪಕರಣಗಳು ಹಾನಿಯಾಗಿವೆ. ಕೆಲ ಹೊತ್ತಲ್ಲೇ ಬೆಂಕಿ ತಾನಾಗಿಯೇ ನಂದಿದೆ.
ಘಟನೆಗೂ ಮುನ್ನ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ. ಗಲಾಟೆ ವಿಚಾರವಗಿಯೇ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಪೆಟ್ರೋಲ್ ಬಾಂಬ್ ಎಸೆಯಲಾಗಿರುವ ಶಂಕೆ ವ್ಯಕ್ತವಾಗಿದೆ.
ಮಾರಿಹಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.