ಕೋಲಾರ: ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ರಾಮಸಾಗರ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಸಿಬ್ಬಂದಿ ಕಾಮಚೇಷ್ಟೆ ನಡೆಸಿದ್ದಾರೆ. ಸಿಬ್ಬಂದಿಯ ಕಿಸ್ಸಿಂಗ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪಂಚಾಯಿತಿ ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ, ಮಹಿಳಾ ಉದ್ಯೋಗಿ ಜೊತೆಗಿರುವ ಖಾಸಗಿ ಫೋಟೋಗಳು ವೈರಲ್ ಆಗಿವೆ. ಪಂಚಾಯಿತಿ ಕಾರ್ಯಾಲಯದಲ್ಲಿಯೇ ಕಿಸ್ ಮಾಡಿ ಫೋಟೋ ತೆಗೆದುಕೊಂಡಿದ್ದು, ಇವುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನನ್ನ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ ಎಂದು ಮಹಿಳಾ ಸಿಬ್ಬಂದಿ ದೂರು ನೀಡಿದ್ದಾರೆ.
ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣಗೆ ಎಚ್ಚರಿಕೆ ನೀಡಿದ್ದಾರೆ. ಸಂತ್ರಸ್ತ ಮಹಿಳೆ ಕೋಲಾರ ಜಿಲ್ಲೆ ಬೇತಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಿಲ್ ಕಲೆಕ್ಟರ್ ಅರ್ಜುನ್ ಹರಿಕೃಷ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿ ಮುಜುಗರ, ಖಾಸಗಿ ಕ್ಷಣಗಳ ಫೋಟೋ ಹಂಚಿಕೆ, ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದಾರೆ.
ಪಂಚಾಯಿತಿಯಿಂದ ಮನೆ ಕಟ್ಟಿಸಿ ಕೊಡುತ್ತೇನೆ. ನಿನ್ನ ಪತಿಗೆ ಕೆಲಸ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿದ್ದಾನೆ. ಬಲವಂತವಾಗಿ ಪ್ರೇರೇಪಿಸಿ ಕಿಸ್ ಮಾಡಿಸಿಕೊಂಡಿದ್ದಾನೆ. ಅದನ್ನು ಮೊಬೈಲ್ ನಲ್ಲಿ ಸೆಲ್ಫಿ ಫೋಟೋ ತೆಗೆದುಕೊಂಡು ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಬೆದರಿಕೆ ಹಾಕಿದ್ದಾನೆ. ಕೆಲಸದಿಂದ ತೆಗೆದು ಹಾಕುತ್ತೇನೆ ಮತ್ತು ಖಾಸಗಿ ಕ್ಷಣಗಳ ಫೋಟೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.