ಕಲಬುರಗಿ: ಸಿನಿಮೀಯ ರೀತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಅಪಹರಣಕ್ಕೆ ಯತ್ನ ನಡೆದಿದೆ. ಪೊಲೀಸರು ಎಂದು ಹೇಳಿಕೊಂಡು ಬಂದಿದ್ದ ನಾಲ್ವರು ಆರೋಪಿಗಳಲ್ಲಿ ಒಬ್ಬನನ್ನು ಗ್ರಾಮಸ್ಥರು ಹಿಡಿದು ಥಳಿಸಿದ್ದಾರೆ.
ಕಲಬುರ್ಗಿ ತಾಲೂಕಿನ ಸಿಂದಗಿ ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ನಾಳೆ ಸಾವಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ನಾಗಮ್ಮ ಕೊಂಡೆದ್ ಅವರನ್ನು ಅಪಹರಿಸಲು ಯತ್ನಿಸಲಾಗಿದೆ.
ನಿನ್ನೆ ಸಂಜೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನಾಗಮ್ಮ ಅವರನ್ನು ಅಪಹರಣ ಮಾಡಲು ಯತ್ನ ನಡೆದಿದೆ. ಕ್ರೂಸರ್ ವಾಹನದಲ್ಲಿ ಬಂದಿದ್ದ ನಾಲ್ವರು ಅಪಹರಣಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ನಾಗಮ್ಮ ಅವರ ಪುತ್ರ ಮತ್ತು ಗ್ರಾಮಸ್ಥರು ಅಪಹರಣಕಾರರಿಂದ ನಾಗಮ್ಮ ಅವರನ್ನು ರಕ್ಷಿಸಿದ್ದಾರೆ. ಈ ವೇಳೆ ಅಪಹರಣಕಾರರು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.
ಆರೋಪಿಗಳಲ್ಲಿ ಓರ್ವ ಶಿವಕುಮಾರ್ ನನ್ನು ಗ್ರಾಮಸ್ಥರು ಹಿಡಿದುಕೊಂಡಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಆರೋಪಿಯನ್ನು ಮರಕೆ ಕಟ್ಟಿಹಾಕಿ ಗ್ರಾಮಸ್ಥರು ಥಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಶಶಿಕುಮಾರ್, ಮಲ್ಲು ಕಡಗಂಚಿ ಸೇರಿದಂತೆ ಹಲವರಿಂದ ಗ್ರಾಮ ಪಂಚಾಯಿತಿ ಸದಸ್ಯೆ ನಾಗಮ್ಮ ಅವರನ್ನು ಅಪಹರಿಸಲು ಯತ್ನ ನಡೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಲು ಓರ್ವ ಸದಸ್ಯರ ಬೆಂಬಲ ಅಗತ್ಯವಿರುವ ಹಿನ್ನೆಲೆಯಲ್ಲಿ ಸದಸ್ಯೆ ನಾಗಮ್ಮ ಅವರನ್ನು ಅಪಹರಿಸಲು ಯತ್ನಿಸಲಾಗಿದೆ.
ಘಟನೆಯಲ್ಲಿ ನಾಗಮ್ಮ ಮತ್ತು ಅವರ ಪುತ್ರ ಮಲ್ಲಿಕಾರ್ಜುನ ಅವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರಗಿ ಸಬ್ ಅರ್ಬನ್ ಠಾಣೆಯಲ್ಲಿ 10 ಜನರ ವಿರುದ್ಧ ಕೇಸ್ ದಾಖಲಾಗಿದೆ.