ಬೆಂಗಳೂರು: ಮದುವೆಯ ಕಡ್ಡಾಯ ನೋಂದಣಿ ಅಧಿಕಾರ ಗ್ರಾಮ ಪಂಚಾಯಿತಿಗಳಿಗೆ ವಹಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ಮಾಡಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಲ್ಯ ವಿವಾಹ ತಡೆಯಲು ಮದುವೆಯ ಕಡ್ಡಾಯ ನೋಂದಣಿಯಾಗಬೇಕು. ನೋಂದಣಿಯನ್ನು ಗ್ರಾಮ ಪಂಚಾಯಿತಿ ಅಧಿಕಾರ ವ್ಯಾಪ್ತಿಗೆ ಒಳಪಡಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಗದ ಬಳಿ ಬಾಲ್ಯ ವಿವಾಹ ತಡೆಗೆ ಇರುವ ಮಾರ್ಗ ಕೇಳಲಾಗಿದ್ದು, ಇದಕ್ಕೆ ಆಯೋಗ ಪಂಚಾಯಿತಿಗೆ ಮದುವೆ ನೋಂದಣಿ ಅಧಿಕಾರ ನೀಡುವಂತೆ ಶಿಫಾರಸು ಮಾಡಿದೆ. ಪ್ರತಿವರ್ಷ ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗುತ್ತಿದ್ದು, ಮದುವೆ ನೋಂದಣಿಗೆ ಸೂಚಿಸಿದ್ದರೂ, ಕಡ್ಡಾಯವಾಗಿ ನೋಂದಣಿ ಮಾಡಿಸುತ್ತಿಲ್ಲ. ಅವಶ್ಯಕತೆ ಇದ್ದಾಗ ಮಾತ್ರ ಮದುವೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಬಾಲ್ಯ ವಿವಾಹ ಪತ್ತೆ ಕಾರ್ಯ ಕಷ್ಟವಾಗಿದೆ. ಪ್ರಕರಣಗಳ ಸಂಖ್ಯೆ ಭಾರಿ ಹೆಚ್ಚಾಗುತ್ತಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ವ್ಯಾಪ್ತಿಯಲ್ಲಿರುವ ಉಪ ನೋಂದಣಾಧಿಕಾರಿ ಮತ್ತು ವಿವಾಹ ನೋಂದಣಾಧಿಕಾರಿಗಳಿಗೆ ವಿವಾಹ ನೋಂದಣಿ ಅಧಿಕಾರವನ್ನು ನೀಡಲಾಗಿದ್ದು, ನೋಂದಣಿ ಪ್ರಕ್ರಿಯೆ ಸಾಕಷ್ಟು ವಿಳಂಬವಾಗಿದೆ. ಈ ಕಾರಣದಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಗಳಿಗೆ ವಿವಾಹ ನೋಂದಣಿ ಅಧಿಕಾರ ನೀಡಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೋಂದಣಿ ಜವಾಬ್ದಾರಿ ವಹಿಸಿ 250 ರೂ. ಒಳಗೆ ಶುಲ್ಕ ನಿಗದಿ ಮಾಡಿ ನೋಂದಣಿ ಕಡ್ಡಾಯಗೊಳಿಸಬೇಕು. ಮದುವೆ ನೋಂದಣಿಗೆ ವಿವಾಹಿತರಿಬ್ಬರ ವಯಸ್ಸಿನ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಲಾಗಿದೆ.