ಬೆಂಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ನಿಗದಿ, ಉದ್ಯೋಗ ಭದ್ರತೆ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಫ್ರೀಡಂ ಪಾರ್ಕ್ ನನಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟ ಹಿಂಪಡೆಯಲಾಗಿದೆ.
ಕನಿಷ್ಠ ವೇತನ 31,000 ರೂ. ನಿಗದಿ, ನಿವೃತ್ತರಿಗೆ 6000 ರೂ. ಪಿಂಚಣಿ, ಅನಾರೋಗ್ಯ ನೌಕರರ ಆಸ್ಪತ್ರೆ ವೆಚ್ಚವನ್ನು ಸರ್ಕಾರ ಭರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ಕೈಗೊಳ್ಳಲಾಗಿತ್ತು.
ಸಚಿವರು ಬೇಡಿಕೆ ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಒಂದು ವಾರದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಹೀಗಾಗಿ ಹೋರಾಟ ಸ್ಥಗಿತಗೊಳಿಸಿದ್ದು, ಕ್ರಮ ಕೈಗೊಳ್ಳದಿದ್ದಲ್ಲಿ ಸಚಿವರ ಮನೆಗೆ ಮುತ್ತಿಗೆ ಹಾಕುವುದಾಗಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ತಿಳಿಸಿದ್ದಾರೆ.