ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಮೂರ್ನಾಲ್ಕು ತಿಂಗಳೊಳಗೆ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿಗಳಿಗೆ 30ಕ್ಕೂ ಹೆಚ್ಚು ಇಲಾಖೆಗಳ ಸೇವೆ ಒದಗಿಸುವ ಅಧಿಕಾರ ನೀಡಲಾಗಿದೆ. ರಾಜ್ಯದ ಗ್ರಾಮಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿ ಬಲ ತುಂಬಲಾಗುತ್ತದೆ ಎಂದು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಸಿಎಂ ಮಾಹಿತಿ ನೀಡಿದ್ದಾರೆ.
326 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಸಲ್ಲಿಸಿದ ಪ್ರಸ್ತಾವನೆ ಆರ್ಥಿಕ ಇಲಾಖೆ ಮುಂದಿದೆ. ಕಾರ್ಯದರ್ಶಿ ಗ್ರೇಡ್ -1 487 ಹುದ್ದೆಗಳ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು. ಕಾರ್ಯದರ್ಶಿ ಗ್ರೇಡ್- 2 ರ 556 ಹುದ್ದೆಗಳಲ್ಲಿ 343 ಹುದ್ದೆಗಳನ್ನು ನೇರ ನೇಮಕಾತಿ ಮಾಡಲಿದ್ದು, ಉಳಿದ ಹುದ್ದೆಗಳನ್ನು ಭಡ್ತಿ ಮೂಲಕ ಭರ್ತಿ ಮಾಡಲಾಗುವುದು. 625 ಎಸ್.ಡಿ.ಎ. ಹುದ್ದೆಗಳಲ್ಲಿ 124 ನೇರ ನೇಮಕಾತಿ ಮಾಡಲಿದ್ದು, ಉಳಿದವನ್ನು ಭಡ್ತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು. ಮೂರ್ನಾಲ್ಕು ತಿಂಗಳಲ್ಲಿ ಶೇ. 90 ರಷ್ಟು ಹುದ್ದೆಗಳು ಭರ್ತಿಯಾಗಲಿವೆ ಎಂದು ತಿಳಿಸಿದ್ದಾರೆ.