![](https://kannadadunia.com/wp-content/uploads/2021/12/cm-basavaraj-bommai.jpg)
ಹಾವೇರಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ ಸೇರಿದಂತೆ ಅನೇಕ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಬಿಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನ ತಮ್ಮ ಕೆಲಸ ಕಾರ್ಯಗಳಿಗೆ ತಾಲೂಕು ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸಲು ತಾಲೂಕು ಕಚೇರಿಯಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸಂಧ್ಯಾಸುರಕ್ಷಾ ಸೇರಿದಂತೆ ಹಲವು ಸೇವೆಗಳನ್ನು ಬೇರ್ಪಡಿಸಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮುಂದಿನ ಮಾರ್ಚ್ ಒಳಗೆ 4 ಲಕ್ಷ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 750 ಗ್ರಾಮಪಂಚಾಯಿತಿಗಳನ್ನು ಸಮಗ್ರ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದ್ದು, ಶುದ್ಧ ಕುಡಿಯುವ ನೀರು, ರಸ್ತೆ, ವಸತಿ ಯೋಜನೆ ಸೇರಿದಂತೆ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಸಾಧನೆ ಮಾಡಿದ ಪಂಚಾಯಿತಿಗಳಿಗೆ 25 ಲಕ್ಷ ರೂಪಾಯಿ ಪ್ರೋತ್ಸಾಹ ನೀಡಲಾಗುತ್ತದೆ. ಮುಂದಿನ ಹಂತದಲ್ಲಿ 750 ಗ್ರಾಮಪಂಚಾಯಿತಿಗಳನ್ನು ಅಭಿವೃದ್ಧಿಪಡಿಸಲಾಗುವುದು. ಹಂತ ಹಂತವಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಯೋಜನೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ್ದಾರೆ.