ಬೆಂಗಳೂರು: ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯದಿಂದ ಗ್ರಾಮ ಒನ್ ಯೋಜನೆಯನ್ನು ರಾಜ್ಯದ 12 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವ ಕುರಿತು ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಗರ ಪ್ರದೇಶಗಳಲ್ಲಿ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ ನೀಡುತ್ತಿರುವ ಸೇವೆಯನ್ನು ಹಳ್ಳಿಗಳಿಗೂ ವಿಸ್ತರಿಸಲು ಗ್ರಾಮ ಒನ್ ಅನುಷ್ಠಾನಗೊಳಿಸಲಾಗುವುದು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೂಪಿಸಲಾಗಿದ್ದ ಯೋಜನೆ ಪ್ರಾಯೋಗಿಕವಾಗಿ ಹಲವೆಡೆ ಆರಂಭವಾಗಿದೆ. ಈಗ 12 ಜಿಲ್ಲೆಗಳಲ್ಲಿ ಆರಂಭಿಸಲಾಗುವುದು ಎಂದು ಹೇಳಲಾಗಿದೆ.
ಬೆಳಗಾವಿ, ತುಮಕೂರು, ಶಿವಮೊಗ್ಗ, ಕೊಪ್ಪಳ, ದಾವಣಗೆರೆ, ಚಿಕ್ಕಮಗಳೂರು, ಬೀದರ್, ವಿಜಯಪುರ, ಕೊಡಗು, ಹಾವೇರಿ, ಬಳ್ಳಾರಿ, ಉಡುಪಿ ಜಿಲ್ಲೆಗಳಲ್ಲಿ ಫ್ರಾಂಚೈಸಿ ಆಧಾರದಲ್ಲಿ ಸೇವಾ ಕೇಂದ್ರ ಆರಂಭಿಸಲಾಗುವುದು. ಈ ಕೇಂದ್ರಗಳಲ್ಲಿ ಸೇವಾಸಿಂಧು ಯೋಜನೆಯ 750 ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಪಡೆಯಲು ಅರ್ಜಿ ಸ್ವೀಕರಿಸಲಿದ್ದು, ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸಲಿವೆ ಎಂದು ಹೇಳಲಾಗಿದೆ.