ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸೇವೆಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗುವುದು. ‘ಗ್ರಾಮ ಒನ್’ ನಾಗರಿಕ ಸೇವಾ ಕೇಂದ್ರ ಆರಂಭಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಪ್ರಾಯೋಗಿಕವಾಗಿ ದಾವಣಗೆರೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದು.
ಇಂದು ಸಂಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯೋಜನೆಗೆ ವರ್ಚುಯಲ್ ಚಾಲನೆ ನೀಡಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಎಸ್. ಸುರೇಶ್ ಕುಮಾರ್ ಮೊದಲಾದವರು ಭಾಗಿಯಾಗಲಿದ್ದಾರೆ.
‘ಗ್ರಾಮ ಒನ್’ ನಾಗರಿಕ ಸೇವಾ ಕೇಂದ್ರದಲ್ಲಿ ಹಲವಾರು ಸೇವೆಗಳು ಸಿಗಲಿವೆ. ಕಾಲಮಿತಿಯಲ್ಲಿ ಮತ್ತು ಪಾರದರ್ಶಕವಾಗಿ ಸೇವೆ ಒದಗಿಸಲು ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಮಾದರಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೇವೆಗಳನ್ನು ತಮ್ಮ ವ್ಯಾಪ್ತಿಯಲ್ಲಿಯೇ ದೊರಕಿಸಿಕೊಡಲು ಗ್ರಾಮ ಒನ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
750 ಕ್ಕೂ ಹೆಚ್ಚು ಅಗತ್ಯ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಸಿಗಲಿವೆ. ಗ್ರಾಮೀಣ ಪ್ರದೇಶದ ಜನ ಸೇವೆ ಪಡೆಯಲು ತಾಲೂಕು ಮತ್ತು ಹೋಬಳಿ ಕೇಂದ್ರಗಳಿಗೆ ಅಲೆಯುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಲಾಗಿದೆ. ದಾವಣಗೆರೆ ತಾಲೂಕಿನ ಮಾಳಗೊಂಡನಹಳ್ಳಿಯಲ್ಲಿ ಗ್ರಾಮ ಒನ್ ಕೇಂದ್ರವನ್ನು ಉದ್ಘಾಟಿಸುವುದರೊಂದಿಗೆ ಯೋಜನೆಗೆ ಚಾಲನೆ ನೀಡಲಾಗುವುದು.