ಕೊಪ್ಪಳ: ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ಸಿಗಬೇಕೆಂಬ ಉದ್ದೇಶದಿಂದ `ಗ್ರಾಮ ಒನ್’ ನಾಗರೀಕರ ಸೇವಾ ಕೇಂದ್ರಗಳನ್ನು ಗ್ರಾಮ ಪಂಚಾಯತ್ಗಳಲ್ಲಿ ತೆರೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.
ತಾಲ್ಲೂಕಿನ ಕಿನ್ನಾಳ ಗ್ರಾಮಪಂಚಯತಿಯಲ್ಲಿ `ಗ್ರಾಮ ಒನ್ ನಾಗರೀಕರ ಸೇವಾ ಕೇಂದ್ರ’ವನ್ನು ವರ್ಚುಯಲ್ ಮಾದರಿಯಲ್ಲಿ ಉದ್ಘಾಟಿಸಿ, ಮಾತನಾಡಿದರು.
ಗ್ರಾಮ ಒನ್ ಸೇವೆಯ ಮುಖಾಂತರ ಗ್ರಾಮೀಣ ಭಾಗದ ಜನರು ತಾಲ್ಲೂಕು ಕಚೇರಿಗಳಿಗೆ ಅಲೆಯುವುದು ಮತ್ತು ತಾಲ್ಲೂಕು ಕಚೇರಿಗಳ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಈ ಸೇವಾ ಕೇಂದ್ರಗಳ ಉದ್ದೇಶವಾಗಿದೆ. ಈ ಹಿಂದೆ ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆಗಳಲ್ಲಿ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ತೆರೆಯಲಾಗಿತ್ತು. ಈಗ ರಾಜ್ಯದ 12 ಜಿಲ್ಲೆಗಳ 3026 ಗ್ರಾಮ ಪಂಚಾಯತ್ಗಳಲ್ಲಿ `ಗ್ರಾಮ-ಒನ್’ ಸೇವಾಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಗ್ರಾಮ ಒನ್ ಕೇಂದ್ರಗಳ ಮೂಲಕ ಹಕ್ಕು ಮತ್ತು ಹಿಡುವಳಿ ಮತ್ತು ಬೆಳೆಗಳ ದಾಖಲೆ(ಆರ್.ಟಿ.ಸಿ), ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಕಾರ್ಡ್, ಆಧಾರ್ ಕಾರ್ಡ್, ವೃದ್ಧಾಪ್ಯ/ ವಿಧವಾ/ ಅಂಗವಿಕಲ ವೇತನ, ಹಿರಿಯ ನಾಗರೀಕರ ಗುರುತಿನ ಚೀಟಿ ಸೇವೆ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಡಿಪ್ಲೋಮಾ ಮೂಲ ಪ್ರಮಾಣ ಪತ್ರ, ಸಣ್ಣ ಮತ್ತು ಅತಿಸಣ್ಣ ಪ್ರಮಾಣ ಪತ್ರ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ಗಳು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸೇವೆಗಳು, ಇ-ಸ್ಟಾಂಪ್ ಸೇರಿದಂತೆ 100 ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ನೀಡಲಾಗುವುದು ಎಂದರು.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ವರ್ಚುಯಲ್ ವೇದಿಕೆ ಮೂಲಕ ಮುಖ್ಯಮಂತ್ರಿಗಳೊAದಿಗೆ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಗ್ರಾಮ-ಒನ್ ಕೇಂದ್ರಗಳ ಮುಖಾಂತರ ಸರ್ಕಾರದ ವಿವಿಧ ಸೇವೆಗಳನ್ನು ಒಂದೇ ಸೂರಿನಡಿ ಆಯಾ ಗ್ರಾಮ ಪಂಚಾಯತ್ಗಳಲ್ಲಿ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಕೊಪ್ಪಳ ತಹಶೀಲ್ದಾರ ಅಮರೇಶ ಬಿರಾದರ್, ಕಿನ್ನಾಳ ಗ್ರಾ.ಪಂ. ಅಧ್ಯಕ್ಷೆ ಪುಷ್ಪ ರಾಜು ಹರಿಜನ್, ಉಪಾಧ್ಯಕ್ಷ ಮೈಲಾರಪ್ಪ, ಸದಸ್ಯರಾದ ಕಾಳಪ್ಪ ಬಿದರೂರು, ಸಣ್ಣೆಪ್ಪ ಕಾರಬ್ಯಾಳಿ ಗ್ರಾಮಸ್ಥರು ಉಪಸ್ಥಿತರಿದ್ದರು.