ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗ್ರಾಮ ಒನ್ ಯೋಜನೆಯ ಕುರಿತಾಗಿ ಜಿಲ್ಲಾಡಳಿತ ಮತ್ತು ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್ ಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ್ದಾರೆ.
ರಾಜ್ಯದಲ್ಲಿ 4 ಲಕ್ಷದಷ್ಟು ಬಿಪಿಎಲ್, ಎಪಿಎಲ್ ಕಾರ್ಡ್ ಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಕಾರ್ಡ್ ಗಳನ್ನು ಗ್ರಾಮ ಒನ್ ಸೇವಾ ಕೇಂದ್ರಗಳ ಮೂಲಕ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಸರ್ಕಾರದ ಅಧಿಕಾರ ಮತ್ತು ಜವಾಬ್ದಾರಿಯನ್ನು ಆಪರೇಟರ್ ಗಳಿಗೆ ನೀಡಲಾಗಿದ್ದು, ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಬೇಕು. ಆಪರೇಟರ್ಗಳು ಸರ್ಕಾರದ ಪ್ರತಿನಿಧಿಗಳಾಗಿದ್ದಾರೆ ಎಂದು ಹೇಳಿದ್ದಾರೆ.
ಕಂಪ್ಯೂಟರ್ ಆಪರೇಟರ್ ಗಳ ಕಾರ್ಯಕ್ಷಮತೆ ಹೆಚ್ಚಿಸಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಒಂದು ವರ್ಷದ ಅವಧಿಯಲ್ಲಿ ಪ್ರತಿ ವಾರ ಮೂರು ಉತ್ತಮ ಆಪರೇಟರ್ ಗಳನ್ನು ಆಯ್ಕೆ ಮಾಡಲಿದ್ದು, ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ ಬಹುಮಾನ 7000 ರೂ., ತೃತೀಯ ಬಹುಮಾನ 5 ಸಾವಿರ ರೂ.ಗಳನ್ನು ಇ -ಆಡಳಿತ ಇಲಾಖೆಯಿಂದ ನೀಡಲಾಗುತ್ತದೆ. ಜಿಲ್ಲಾಮಟ್ಟದಲ್ಲಿ ಕಾರ್ಯಕ್ಷಮತೆ ಉತ್ತಮವಾಗಿರುವ ಜಿಲ್ಲೆಗೆ ಪ್ರತಿ ತಿಂಗಳು 1 ಲಕ್ಷ ರೂ. ಬಹುಮಾನ ಕೊಡಲಾಗುವುದು ಎಂದರು.