ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಸೇವೆಗಳನ್ನು ಆನ್ಲೈನ್ ನಲ್ಲಿ ಪಡೆಯಬಹುದು. ಗ್ರಾಫಂ ಸೇವೆಗಳಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿ ಪರಿಶೀಲನೆ, ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಕುಂದುಕೊರತೆಗಳನ್ನು ದಾಖಲಿಸಿ ಮೊಬೈಲ್ ನಲ್ಲಿ ವಾಟ್ಸಾಪ್ ಚಾಟ್ ಮೂಲಕ ಪರಿಹಾರ ಪಡೆಯಬಹುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಈ ನಿಟ್ಟಿನಲ್ಲಿ ಸಿದ್ಧಪಡಿಸಿರುವ ಮಹತ್ವದ ‘ಪಂಚಮಿತ್ರ’ ವಾಟ್ಸಾಪ್ ನಂಬರ್ 82775 06000 ಅನ್ನು ಸಚಿವ ಪ್ರಿಯಾಂಕ್ ಖರ್ಗೆ ಲೋಕಾರ್ಪಣೆ ಮಾಡಿದ್ದಾರೆ.
ಮೊಬೈಲ್ ನಲ್ಲಿ ನಂಬರ್ ಸೇವ್ ಮಾಡಿಕೊಂಡು ಚಾಟ್ ಆರಂಭಿಸಿದರೆ ಭಾಷೆಯ ಆಯ್ಕೆ, ಹೆಸರು, ವಿಳಾಸ, ಮೊಬೈಲ್ ನಂಬರ್ ಮಾಹಿತಿ ನೀಡಿ ಲಾಗಿನ್ ಆಗಬೇಕು. ಬಳಿಕ ಆಯ್ಕೆಗಳು ಆರಂಭವಾಗುತ್ತವೆ. ಕ್ರಮ ಸಂಖ್ಯೆಗಳನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯಿತಿ ಆಯ್ಕೆ ಮಾಡಿ ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿಯ ಮಾಹಿತಿ ಪಡೆಯಬಹುದು.
ಈ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ದೇಶದಲ್ಲಿ ಮೊದಲ ಬಾರಿಗೆ ಪಂಚಮಿತ್ರ ಎನ್ನುವ ವಿನೂತನ ವಾಟ್ಸಾಪ್ ಚಾಟ್ ಅನ್ನು ಅನುಷ್ಠಾನಕ್ಕೆ ತರಲಾಗಿದೆ. ಇದರ ಮೂಲಕ ಸಾರ್ವಜನಿಕರು ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ ಕಟ್ಟಡ ನಿರ್ಮಾಣ ಲೈಸೆನ್ಸ್, ನೀರು ಸರಬರಾಜು ಸಂಪರ್ಕ, ವ್ಯಾಪಾರ ಪರವಾನಿಗೆ ಸೇರಿದಂತೆ ಎಲ್ಲಾ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳ ಸ್ಥಿತಿಗತಿ ಪರಿಶೀಲಿಸಬಹುದು ಎಂದು ತಿಳಿಸಿದ್ದಾರೆ.
ತ್ಯಾಜ್ಯ ನಿರ್ವಹಣೆ, ನರೇಗಾ ಯೋಜನೆ, ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದ 78 ವರ್ಗಗಳ ಕುಂದು ಕೊರತೆಗಳನ್ನು ದಾಖಲಿಸಿ ಪರಿಹಾರ ಪಡೆದುಕೊಳ್ಳಬಹುದು. ಇದಲ್ಲದೆ ಸ್ವಾಧೀನ ಪ್ರಮಾಣ ಪತ್ರ, ರಸ್ತೆ ಅಗೆಯಲು ಅನುಮತಿ, ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದನಾ ಘಟಕ ಪರವಾನಿಗೆ, ನಿರಾಕ್ಷೇಪಣಾ ಪತ್ರ, ಜಾಬ್ ಕಾರ್ಡ್ ವಿತರಣೆ ಮೊದಲಾದ ಸೇವೆಗೆ ಅರ್ಜಿ ಸಲ್ಲಿಸಬಹುದಾಗಿದೆ.