ರಾಜ್ಯ ಸರ್ಕಾರ, ಗ್ರಾಮ ಪಂಚಾಯಿತಿಗಳ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆಗೆ ಮೀಸಲಾತಿ ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕೆಲ ಭಾಗಗಳಲ್ಲಿ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಸದಸ್ಯರುಗಳನ್ನು ಸೆಳೆಯುವ ಕಾರ್ಯದಲ್ಲಿ ತೊಡಗಿದ್ದಾರೆ.
ಬಾಡೂಟದ ಪಾರ್ಟಿಗಳು ಜೋರಾಗಿದ್ದು, ಆಣೆ ಪ್ರಮಾಣದ ಜೊತೆಗೆ ರೆಸಾರ್ಟ್ ರಾಜಕೀಯವೂ ಸಹ ಚುರುಕು ಪಡೆದುಕೊಂಡಿದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಆಕಾಂಕ್ಷಿಗಳು ಸದಸ್ಯರುಗಳನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ರೆಸಾರ್ಟ್ ಬುಕ್ ಮಾಡಲು ಮುಂದಾಗಿದ್ದರೆ, ಕೆಲವರು ತೀರ್ಥಕ್ಷೇತ್ರಗಳ ಯಾತ್ರೆ ಮಾಡಿಸುವ ಮೂಲಕ ಪ್ರಮಾಣ ಮಾಡಿಸಿಕೊಳ್ಳಲು ಸಜ್ಜಾಗಿದ್ದಾರೆ.
ಮತ್ತೊಂದು ಸ್ವಾರಸ್ಯಕರ ಸಂಗತಿ ಎಂದರೆ ಮಹಿಳಾ ಸದಸ್ಯರು ಇದ್ದ ಕಡೆ ಅವರ ಪತಿಯಂದಿರಿಗೂ ಅದೃಷ್ಟ ಖುಲಾಯಿಸಿದ್ದು, ರೆಸಾರ್ಟ್ ಜೊತೆಗೆ ತೀರ್ಥಕ್ಷೇತ್ರಗಳ ಪ್ರವಾಸವೂ ಲಭ್ಯವಾಗುತ್ತಿದೆ. ಇನ್ನು ಹಣದ ಆಮಿಷ ಒಡ್ಡುತ್ತಿರುವ ಘಟನೆಗಳು ಸಹ ನಡೆದಿದೆ ಎಂದು ಹೇಳಲಾಗುತ್ತಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಾಯಕರೂ ಸಹ ತಮ್ಮ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರಲಿ ಎಂದು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ.