ಧಾರವಾಡ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ರೈತರ ಕಡಲೆ ಮತ್ತು ಹೆಸರು ಕಾಳು ಚೀಲಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಿ ಉಗ್ರಾಣ ವ್ಯವಸ್ಥಾಪಕ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, 70 ಲಕ್ಷ ರೂಪಾಯಿ ಮೌಲ್ಯದ 1869 ಚೀಲ ಧಾನ್ಯ ಜಪ್ತಿ ಮಾಡಲಾಗಿದೆ.
ರೈತರು ಹೆಚ್ಚಿನ ಬೆಲೆ ಬಂದಾಗ ಮಾರಾಟ ಮಾಡುವ ಮತ್ತು ಬಿತ್ತನೆ ಸಮಯದಲ್ಲಿ ಬೀಜಕ್ಕೆ ಬೇಕಾಗುತ್ತದೆ ಎನ್ನುವ ಉದ್ದೇಶದಿಂದ ಕಡಲೆ ಹಾಗೂ ಹೆಸರುಕಾಳುಗಳನ್ನು ಅಣ್ಣಿಗೇರಿಯ ಎಪಿಎಂಸಿ ಆವರಣದ ಸರ್ಕಾರಿ ಉಗ್ರಾಣದಲ್ಲಿ ದಾಸ್ತಾನು ಮಾಡಿದ್ದರು.
ಅದರಲ್ಲಿ 4141 ಚೀಲ ಕಡಲೆ ಮತ್ತು ಹೆಸರುಕಾಳು ಚೀಲ ನಾಪತ್ತೆಯಾಗಿದ್ದು, ಹುಬ್ಬಳ್ಳಿ ಪ್ರಾದೇಶಿಕ ವ್ಯವಸ್ಥಾಪಕ ಭೀಮಪ್ಪ ಲಮಾಣಿ ಅವರು ಅಣ್ಣಿಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಉಗ್ರಾಣ ವ್ಯವಸ್ಥಾಪಕ ಆಕಾಶ್ ಮುಶಣ್ಣನವರ, ಸಹೋದ್ಯೋಗಿ ಶಶಿಕುಮಾರ್ ಹಿರೇಮಠ ಎಂಬುವರನ್ನು ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಉತ್ತರ ವಲಯದ ಬೆಳಗಾವಿ ಪೊಲೀಸ್ ಮಹಾ ನಿರೀಕ್ಷಕ ವಿಕಾಸ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಆರೋಪಿಗಳು ಗದಗ ಮತ್ತು ಧಾರವಾಡದಲ್ಲಿ ಕಡಲೆ, ಹೆಸರುಕಾಳು ಮಾರಾಟ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಅಣ್ಣಿಗೇರಿಯ ರಡ್ಡಿ ಬ್ಯಾಂಕ್ ನಲ್ಲಿ 37 ಲಕ್ಷ ರೂ., ಗದಗ ಸೆಂಟ್ರಲ್ ಬ್ಯಾಂಕ್ ನಲ್ಲಿ 45 ಲಕ್ಷ ರೂ. ಸಾಲ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.