ಕಲಬುರಗಿ : ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕಳೆದ ಸೆಪ್ಟೆಂಬರ್ 30 ರಿಂದಲೇ ಪ್ರಾರಂಭವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮತದಾರರು ಹೆಸರು ನೊಂದಾಯಿಸಿಕೊಳ್ಳದಿರುವುದು ಗಮನಿಸಲಾಗಿದೆ. ಇದೂವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳದವರು ಅಂತಿಮ ದಿನಾಂಕದ ವರೆಗೆ ಕಾಯದೆ ಕೂಡಲೆ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳಾಗಿರುವ ಕೃಷ್ಣ ಬಾಜಪೇಯಿ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಅರ್ಹತಾ ದಿನಾಂಕ 01.11.2023 ಆಧರಿಸಿ ಪರಿಷ್ಕರಣೆ ಕಾರ್ಯ ನಡೆದಿದೆ. ಹೊಸದಾಗಿ ಮತದಾರರ ಪಟ್ಟಿ ಸಿದ್ದಪಡಿಸಲಾಗುತ್ತಿದೆ. ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ-18ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವಲ್ಲಿ ಮತದಾರರು ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದಿರುವ ಅವರು, ಅರ್ಜಿ ಸ್ವೀಕರಿಸಲು 2023ರ ನವೆಂಬರ್ 6 ಕೊನೆ ದಿನವಾಗಿದೆ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಮತದಾರ ಪಟ್ಟಿ ಸಿದ್ಧಪಡಿಸುವ ಕಾರ್ಯಕ್ಕೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳಾಗಿದ್ದು, ವಿಭಾಗದ ವ್ಯಾಪ್ತಿಯಲ್ಲಿನ ಜಿಲ್ಲಾಧಿಕಾರಿಗಳು, ಕಲಬುರಗಿ ಮತು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರು, ಸಹಾಯಕ ಆಯುಕ್ತರು, ತಾಲೂಕಿನ ತಹಸೀಲ್ದಾರರು ಸಹಾಯಕ ಮತದಾರರ ನೊಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಿ.01.11.2023ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತಲು ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ದಿ.01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ-18 ರಲ್ಲಿ (ಭಾವಚಿತ್ರದೊಂದಿಗೆ) ಭರ್ತಿ ಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳನ್ನು ಸ್ವಯಂ ಧೃಡೀಕರಿಸಿದಲ್ಲದೇ ಪತ್ರಾಂಕಿತ ಅಧಿಕಾರಿಯಿಂದ ನಿಗಧಿತ ದಿನಾಂಕದೊಳಗೆ ಮತದಾರರ ನೊಂದಣಾಧಿಕಾರಿಗಳು/ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಖುದ್ದಾಗಿ ಬಂದು ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ www.ceo.karnataka.gov.in ವೀಕ್ಷಿಸಬಹುದಾಗಿದೆ.