
ಶಿವಮೊಗ್ಗ: 4.25 ಕ್ವಿಂಟಲ್ ಕಾಳುಮೆಣಸು ಖರೀದಿಸಿ ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದ ಮೂವರು ಪದವೀಧರರನ್ನು ಸಾಗರ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಕಾಂ ಪದವೀಧರ ಅಕ್ಷಯ್(26), ಬಿಇ ಕಂಪ್ಯೂಟರ್ ಸೈನ್ಸ್ ಪದವೀಧರ ಎಸ್.ಕೆ. ಹರ್ಷಿತ್, ಎಂಕಾಂ ಪದವೀಧರ, ಸಹಕಾರಿ ಸಂಸ್ಥೆ ಸಿಇಒ ಆರ್.ಎ. ಕುಮಾರ ಅಭಿನಂದನ್ ಬಂಧಿತ ಆರೋಪಿಗಳು. ಬಂಧಿತರಿಂದ 2.76 ಲಕ್ಷ ರೂಪಾಯಿ ಮೌಲ್ಯದ 4.25 ಕ್ವಿಂಟಲ್ ಕಾಳು ಮೆಣಸು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ವಿಕ್ಕಿ ತಲೆಮರಿಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ನಕಲಿ ಸಿಮ್ ಕಾರ್ಡ್ ಬಳಸಿ ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದವರನ್ನು ಸಂಪರ್ಕಿಸಿ ಕಾಳುಮೆಣಸು ಖರೀದಿ ಬಗ್ಗೆ ಮಾತನಾಡಿದ್ದಾರೆ. ನಂತರ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಕಾಳುಮೆಣಸು ಖರೀದಿಸಿ ನಕಲಿ ಚೆಕ್ ನೀಡಿ ತೆರಳಿದ್ದಾರೆ. ಎರಡು ದಿನಗಳ ನಂತರ ನಕಲಿ ಚೆಕ್ ನೀಡಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಸುಧಾರಿತ ತಂತ್ರಜ್ಞಾನ ಬಳಸಿ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು ಮೊಬೈಲ್ ಸೆಟ್ ಜಾಡು ಹಿಡಿದು ನಾಲ್ಕು ತಿಂಗಳ ನಂತರ ಮೂವರನ್ನು ಬಂಧಿಸಿದ್ದಾರೆ.
ಸಾಗರಪೇಟೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸೀತಾರಾಮ, ಪಿಎಸ್ಐ ಟಿ.ಎಂ. ನಾಗರಾಜ ನೇತೃತ್ವದಲ್ಲಿ ಸಿಬ್ಬಂದಿಗಳಾದ ರತ್ನಾಕರ, ಶ್ರೀನಿವಾಸ, ಮೆಹಬೂಬ್, ವಿಕಾಸ್, ಕೃಷ್ಣಮೂರ್ತಿ, ವಿಶ್ವನಾಥ, ತಾಂತ್ರಿಕ ಸಿಬ್ಬಂದಿಗಳಾದ ಇಂದ್ರೇಶ್, ವಿಜಯಕುಮಾರ್ ಅವರ ತಂಡ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದೆ.