ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2022-23ನೇ ಸಾಲಿಗೆ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾದ(ಆರರಿಂದ ಎಂಟನೇ ತರಗತಿ) ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ‘ಸಿ’ ವಲಯದ ಶಾಲೆಗಳಲ್ಲಿ ಖಾಲಿ ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ಹಂಚಿಕೆ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.
ಕೆಲವು ಜಿಲ್ಲೆಗಳಲ್ಲಿ ‘ಸಿ’ ವಲಯದ ಹುದ್ದೆಗಳು ಲಭ್ಯವಿಲ್ಲದ ಕಾರಣ ಅಂತಹ ಶಿಕ್ಷಕರಿಗೆ ಆಯಾ ವ್ಯಾಪ್ತಿಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ತಾತ್ಕಾಲಿಕವಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ತಾತ್ಕಾಲಿಕವಾಗಿ ಸ್ಥಳ ಆಯ್ಕೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವ 718 ಶಿಕ್ಷಕರಿಗೆ ‘ಸಿ’ ವಲಯದ ಖಾಲಿ ಹುದ್ದೆಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ಹಂಚಿಕೆ ಮಾಡಿ ಆದೇಶಿಸಲಾಗಿದೆ.
609 ಅಭ್ಯರ್ಥಿಗಳಿಗೆ ‘ಸಿ’ ವಲಯದಲ್ಲಿ ಹುದ್ದೆಗಳು ಲಭ್ಯವಿಲ್ಲದ ಕಾರಣ ಅವಕಾಶ ನೀಡಲಾಗಿಲ್ಲ. ಇಂತಹ ಶಿಕ್ಷಕರಿಗೆ ಜುಲೈ 3ರಂದು ಖಾಲಿ ಹುದ್ದೆಗಳ ಪ್ರಕಟಣೆ ಹೊರಡಿಸಿ ಜುಲೈ 4ರಂದು ಸ್ಥಳ ಹಂಚಿಕೆ ಮಾಡುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ತಾತ್ಕಾಲಿಕವಾಗಿ ಸ್ಥಳ ಆಯ್ಕೆ ಮಾಡಿಕೊಂಡ ಎಲ್ಲ ಶಿಕ್ಷಕರು ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ಈ ಸಂಬಂಧ ಡಿಡಿಪಿಐ ಜುಲೈ 1ರಂದು ಸಂಬಂಧಿಸಿದ ಶಿಕ್ಷಕರಿಗೆ ಲಿಖಿತವಾಗಿ ಸೂಕ್ತ ಸೂಚನೆ ನೀಡಿ ಸ್ವೀಕೃತಿ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಈ ಹಿಂದೆ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ಮತ್ತು ನೇಮಕಾತಿ ಆದೇಶಗಳನ್ನು ನೀಡದಿರುವ ಅಭ್ಯರ್ಥಿಗಳಿಗೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ನೇಮಕಾತಿ ಆದೇಶ ಪಡೆದುಕೊಂಡಿರುವ 11,494 ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತಾರೆ. ಆದ್ದರಿಂದ ನೇಮಕಾತಿ ಸಂಬಂಧ ಮುಂದಿನ ದಿನಗಳಲ್ಲಿ ಎದುರಾಗುವ ಎಲ್ಲಾ ಪರಿಣಾಮಗಳು ಮತ್ತು ಗೊಂದಲಗಳಿಗೆ ಡಿಡಿಪಿಐಗಳೇ ಜವಾಬ್ದಾರಿಯಾಗಿರುತ್ತಾರೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ಶಾಲಾ ಶಿಕ್ಷಣ ಆಯುಕ್ತರು ತಿಳಿಸಿದ್ದಾರೆ.