ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪಡಿತರ ಧಾನ್ಯ ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕೆಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆಗ್ರಹಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಈ ಕುರಿತಾಗಿ ಪತ್ರ ಬರೆದಿದ್ದು, ಭಾರತ ಆಹಾರ ನಿಗಮ ಗೋದಾಮುಗಳಿಂದ ಆಹಾರ ಇಲಾಖೆಯ ಸಗಟು ಮಳಿಗೆಗಳಿಗೆ ಮತ್ತು ಸಗಟು ಮಳಿಗೆಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಗಿಸುವ ಲಾರಿಗಳಲ್ಲಿ ಅಕ್ಕಿ ಕದಿಯುವ ಪ್ರಕರಣ ನಿರಂತರವಾಗಿ ನಡೆಯುತ್ತಿದ್ದು, ಅನೇಕ ಸಲ ಪಡಿತರ ಚೀಲದಲ್ಲಿ ಅಕ್ಕಿ ಕಡಿಮೆಯಾಗಿರುತ್ತದೆ. ಇದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಿಸುವಾಗ ಆಹಾರ ಧಾನ್ಯ ಕೊರತೆ ಎದುರಾಗುತ್ತದೆ. ಹೀಗಾಗಿ ಪಡಿತರ ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು. ಆಹಾರ ಇಲಾಖೆಯ ಸಗಟು ಮಳಿಗೆಗಳಿಗೆ ಎಲೆಕ್ಟ್ರಾನಿಕ್ ಆಧಾರಿತ ತೂಕ ಮಾಪನ ಯಂತ್ರ ಮತ್ತು ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.