
ಬೆಂಗಳೂರು: ಸ್ಥಗಿತಗೊಂಡಿದ್ದ ನಗದು ರಹಿತ ಶಸ್ತ್ರಚಿಕಿತ್ಸಾ ಯಶಸ್ವಿನಿ ಯೋಜನೆ ಮರು ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ.
ರೈತರು, ಗ್ರಾಮೀಣ ಜನತೆಗೆ ಇದರಿಂದ ಅನುಕೂಲವಾಗಲಿದೆ. ರೈತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಲು ಸರ್ಕಾರಿ ಆಸ್ಪತ್ರೆಯ ಅನುಮತಿ ಅಗತ್ಯವಿರುವುದಿಲ್ಲ. ನಗದು ರಹಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಗಂಭೀರ ಕಾಯಿಲೆಗಳಿಗೆ ಹಣ ಹೊಂದಿಸುವ ಕಷ್ಟದಿಂದ ಮುಕ್ತಿ ಸಿಗಲಿದೆ.
ಉಚಿತ ಚಿಕಿತ್ಸೆಯ ಪ್ರಯೋಜನ ಕಲ್ಪಿಸುವ ಯಶಸ್ವಿನಿ ಯೋಜನೆ ಶೀಘ್ರವೇ ಮರು ಜಾರಿಗೆ ಚಾಲನೆ ನೀಡಲಾಗುತ್ತದೆ. ಬಜೆಟ್ನಲ್ಲಿ 300 ಕೋಟಿ ರೂಪಾಯಿ ಅನುದಾನ ಮೀಸಲಿಡುವಂತೆ ಸಹಕಾರ ಇಲಾಖೆಯಿಂದ ಮನವಿ ಮಾಡಲಾಗಿದೆ. 44 ಲಕ್ಷ ಸದಸ್ಯರು, ಅವರ ಕುಟುಂಬದವರು ಸೇರಿದಂತೆ ರಾಜ್ಯದ 1.5 ಕೋಟಿ ಜನರಿಗೆ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ ಎಂದು ಹೇಳಲಾಗಿದೆ.
ಸಹಕಾರ ಸೊಸೈಟಿಗಳಲ್ಲಿ ನೋಂದಣಿಯಾಗಿರುವ ಗ್ರಾಮೀಣ ಸದಸ್ಯರಿಗೆ ವಾರ್ಷಿಕ 300 ರೂಪಾಯಿ ವಂತಿಗೆ ಪಡೆಯಲಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯದವರಿಗೆ 250 ರೂ. ಇತರೆ ವರ್ಗದವರಿಗೆ 50 ರೂ.ಗಳನ್ನು ಸರ್ಕಾರ ಸಬ್ಸಿಡಿ ನೀಡುತ್ತದೆ ಎನ್ನಲಾಗಿದೆ.