ಯಾವುದೇ ಕಾರಣಕ್ಕೂ ಕೊನೆಯ ದಿನಾಂಕ ವಿಸ್ತರಣೆ ಸಾಧ್ಯವಿಲ್ಲದ ಕಾರಣ ಕೊನೆಯ ಕ್ಷಣದಲ್ಲಿ ಯಾವುದೇ ಒತ್ತಡದಲ್ಲಿ ಸಿಲುಕದೇ ಇರಲು ಜುಲೈ 31, 2023ಕ್ಕೂ ಮೊದಲು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಂತೆ ಸರ್ಕಾರವು ಎಲ್ಲಾ ತೆರಿಗೆ ಪಾವತಿದಾರರಿಗೆ ಸೂಚನೆ ನೀಡಿದೆ.
ಜುಲೈ 31ರ ಗಡುವನ್ನು ವಿಸ್ತರಣೆ ಮಾಡುವ ಸಾಧ್ಯತೆಯೇ ಇಲ್ಲ. ಹೀಗಾಗಿ ಆದಷ್ಟು ಬೇಗ ತೆರಿಗೆದಾರರು ತಮ್ಮ ರಿಟರ್ನ್ಸ್ ಪಾವತಿ ಮಾಡಬೇಕು ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಆದಾಯ ತೆರಿಗೆ ಇಲಾಖೆಯ ಪ್ರಕಾರ, ಜುಲೈ 11ರವರೆಗೆ ಈಗಾಗಲೇ 2 ಕೋಟಿಗೂ ಅಧಿಕ ಜನರು ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ. ಕಳೆದ ವರ್ಷ ಜುಲೈ 20ರ ಒಳಗಾಗಿ 2 ಕೋಟಿಗೂ ಅಧಿಕ ರಿಟರ್ನ್ಸ್ ಸಲ್ಲಿಕೆಯಾಗಿತ್ತು.
ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ 9 ದಿನಗಳ ಮುಂಚಿತವಾಗಿಯೇ 2 ಕೋಟಿ ಮೈಲಿಗಲ್ಲನ್ನು ತಲುಪಲು ನಮ್ಮ ತೆರಿಗೆದಾರರು ಸಹಾಯ ಮಾಡಿದ್ದಾರೆ. ಈ ಪ್ರಯತ್ನವನ್ನು ನಾವು ಶ್ಲಾಘಿಸಿದ್ದೇವೆ. ಕೊನೆಯ ದಿನಾಂಕವನ್ನು ಮೀರದಂತೆ ಆದಷ್ಟು ಬೇಗ ಪ್ರತಿಯೊಬ್ಬರು ರಿರ್ಟನ್ಸ್ ಸಲ್ಲಿಕೆ ಮಾಡಬೇಕು ಎಂದು ಜುಲೈ 11ರಂದು ಟ್ವೀಟ್ ಮಾಡಿತ್ತು.
ಕಳೆದ ವರ್ಷ ಒಟ್ಟು 5.8 ಕೋಟಿ ರಿರ್ಟನ್ಸ್ ಸಲ್ಲಿಕೆಯಾಗಿದ್ದು ಈ ಸಂಖ್ಯೆಯು ಈ ಬಾರಿ ಹೆಚ್ಚಾಗಬಹುದು ಎಂದು ಸರ್ಕಾರ ನಿರೀಕ್ಷಿಸಿದೆ. ಜುಲೈ 31ರ ಗಡುವಿನ ಬಳಿಕ ಆದಾಯ ತೆರಿಗೆ ಪಾವತಿ ಮಾಡಿದರೆ ತೆರಿಗೆದಾರರು 5000 ರೂಪಾಯಿಗಳನ್ನು ದಂಡದ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ.