ನವದೆಹಲಿ: ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಿದ 30 ದಿನದೊಳಗೆ ಪರವಾನಿಗೆ ನೀಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ಯೋಜನೆ ಪ್ರಕಟಿಸಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆಯಾದ 30 ದಿನದಲ್ಲಿ ಪ್ರವಾಸಿ ಆಪರೇಟರ್ ಗಳಿಗೆ ಅಖಿಲ ಭಾರತ ಪ್ರವಾಸಿ ಪರವಾನಿಗೆಯನ್ನು ನೀಡಲಾಗುವುದು ಎಂದು ಸರ್ಕಾರ ಭಾನುವಾರ ತಿಳಿಸಿದೆ.
ಪರವಾನಿಗೆಗೆ ಆನ್ಲೈನ್ ಮೋಡ್ ನಲ್ಲಿ ಅರ್ಜಿ ಸಲ್ಲಿಸುವವರು ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿ ಶುಲ್ಕವನ್ನು ಠೇವಣಿ ಮಾಡಿದ 30 ದಿನದೊಳಗೆ ಅಖಿಲ ಭಾರತ ಪ್ರವಾಸಿ ಪರವಾನಿಗೆ ನೀಡಲು ನೀಡಲಾಗುವುದು ಎಂದು ಹೇಳಲಾಗಿದೆ.
ಈ ಹೊಸ ನಿಯಮವನ್ನು ಅಖಿಲ ಭಾರತ ಪ್ರವಾಸಿ ವಾಹನಗಳ ಅಧಿಕಾರ ಮತ್ತು ಅನುಮತಿ ನಿಯಮಗಳು -2021 ಎಂದು ಕರೆಯಲಾಗಿದೆ. ಅಸ್ತಿತ್ವದಲ್ಲಿರುವ ಪರವಾನಿಗೆಗಳು ಕೂಡ ಮುಂದುವರೆಯಲಿವೆ. ದೇಶದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.