ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ 2.5 ಲಕ್ಷ ರೂ. ಗಳವರೆಗೂ ಸಬ್ಸಿಡಿ ಘೋಷಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಸಬ್ಸಿಡಿಗಳನ್ನು ಇ-ಕಾರುಗಳು, ಇ-ಬಸ್ಸುಗಳು ಹಾಗೂ ಇ-ಬೈಕ್‌ಗಳ ಮೇಲೆ ನೀಡಲಾಗುವುದು.
ದೇಶದಲ್ಲಿ ಎಲೆಕ್ಟ್ರಿಕ್ ಆಧರಿತ ಸಾರಿಗೆ ಹಾಗೂ ಇಂಧನದ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆ ಹಾಗೂ ಉತ್ಪಾದನೆ (ಫೇಮ್-2) ಯೋಜನೆಗೆ ಚಾಲನೆ ನೀಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರವು ನೀಡುವ ಸಬ್ಸಿಡಿ ಪ್ಯಾಕೇಜನ್ನು ವಿವಿಧ ರಾಜ್ಯಗಳಿಗೆ ವಿತರಿಸಲಾಗುವುದು.
ಕೆಲ ರಾಜ್ಯ ಸರ್ಕಾರಗಳು ತಮ್ಮದೇ ಮಟ್ಟದಲ್ಲಿ ಸಬ್ಸಿಡಿ ನೀಡಲು ಮುಂದಾಗಿವೆ. ಮಹಾರಾಷ್ಟ್ರದಲ್ಲಿ ಇ-ವಾಹನಗಳಿಗೆ ಪ್ರತಿ ಕಿವ್ಯಾ ಬ್ಯಾಟರಿ ಸಾಮರ್ಥ್ಯಕ್ಕೆ ತಲಾ 5,000 ರೂ. ನಂತೆ ಸಬ್ಸಿಡಿ ಕೊಡಲಾಗುತ್ತಿದೆ. ನಾಲ್ಕು ಚಕ್ರಗಳ ಇ-ವಾಹನಗಳನ್ನು ಖರೀದಿ ಮಾಡುವ ಮೊದಲ 10,000 ಮಂದಿಗೆ 1.5 ಲಕ್ಷ ರೂ. ಗಳವರೆಗೆ ಸಬ್ಸಿಡಿ ನೀಡುವುದಾಗಿ ಮಹಾರಾಷ್ಟ್ರ ಸರ್ಕಾರದ ಇ ವಾಹನ ನೀತಿಯಲ್ಲಿ ಸೂಚಿಸಲಾಗಿದೆ. ಕೇಂದ್ರದ ಸಬ್ಸಿಡಿಯೂ ಸೇರಿ ಒಟ್ಟಾರೆ 2.5 ಲಕ್ಷ ರೂ.ಗಳವರೆಗೂ ಈ ರಾಜ್ಯದಲ್ಲಿ ಇ ವಾಹನಗಳ ಖರೀದಿ ಮೇಲೆ ಸಬ್ಸಿಡಿ ಪಡೆಯಬಹುದಾಗಿದೆ.
ಉತ್ತರ ಪ್ರದೇಶದಲ್ಲೂ ಸಹ ನಾಲ್ಕು ಚಕ್ರಗಳ ಇ ವಾಹನಗಳ ಮೊದಲ 25,000 ಖರೀದಿದಾರರಿಗೆ ತಲಾ ಒಂದು ಲಕ್ಷ ರೂ.ಗಳವರೆಗೆ ಸಬ್ಸಿಡಿ ನೀಡಲಾಗುವುದು. ದೆಹಲಿ ಸರ್ಕಾರವೂ ಸಹ ಮೊದಲ 1000 ಖರೀದಿದಾರರಿಗೆ ತಲಾ 1.5 ಲಕ್ಷ ರೂ.ಗಳ ಸಬ್ಸಿಡಿ ಘೋಷಿಸಿದೆ.
ಇದೇ ರೀತಿ ಗುಜರಾತ್ ಹಾಗೂ ಉತ್ತರಾಖಂಡ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಸಬ್ಸಿಡಿ ನೀಡುತ್ತಿವೆ.