ನವದೆಹಲಿ: ರೈತರಿಗೆ ವೈಜ್ಞಾನಿಕ ಜ್ಞಾನವನ್ನು ತಲುಪಿಸುವ ಉದ್ದೇಶದಿಂದ ಸೆಪ್ಟೆಂಬರ್‌ನಿಂದ ಪ್ರಾರಂಭವಾಗುವ ಮಾಸಿಕ ರೇಡಿಯೊ ಕಾರ್ಯಕ್ರಮ ‘ಕಿಸಾನ್ ಕಿ ಬಾತ್’ ಅನ್ನು ಸರ್ಕಾರ ಪ್ರಾರಂಭಿಸಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಮಾದರಿಯಲ್ಲೇ ಮಾಸಿಕ ರೇಡಿಯೋ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ತಿಳಿಸಿದ್ದಾರೆ.
ಕೃಷಿ ಪದ್ಧತಿಗಳನ್ನು ಆಧುನೀಕರಿಸುವ ಮತ್ತು ಇತ್ತೀಚಿನ ವೈಜ್ಞಾನಿಕ ಜ್ಞಾನದೊಂದಿಗೆ ರೈತರನ್ನು ಸಜ್ಜುಗೊಳಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಈ ಕಾರ್ಯಕ್ರಮವು ಕೃಷಿ ವಿಜ್ಞಾನಿಗಳು, ಇಲಾಖೆ ಅಧಿಕಾರಿಗಳು ಮತ್ತು ಸ್ವತಃ ಸಚಿವರ ಕೊಡುಗೆಗಳನ್ನು ಒಳಗೊಂಡಿರುತ್ತದೆ, ವೈಜ್ಞಾನಿಕ ಪ್ರಗತಿಗಳ ಕುರಿತು ಪ್ರಮುಖ ಒಳನೋಟಗಳನ್ನು ನೀಡುತ್ತದೆ.
ರೈತರಿಗೆ ಸಾಮಾನ್ಯವಾಗಿ ಮಾಹಿತಿಯ ಕೊರತೆಯಿದೆ, ಇದು ಕೀಟನಾಶಕಗಳ ದುರುಪಯೋಗಕ್ಕೆ ಕಾರಣವಾಗಬಹುದು. ಈ ಸಮಸ್ಯೆಯನ್ನು ಪರಿಹರಿಸಲು ರೈತರಿಗೆ ವೈಜ್ಞಾನಿಕ ಜ್ಞಾನವನ್ನು ತ್ವರಿತವಾಗಿ ವರ್ಗಾಯಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ವಿಜ್ಞಾನಿಗಳು ನಡೆಸುವ ಸಂಶೋಧನೆಗಳ ಬಗ್ಗೆ ರೈತರಿಗೆ ಅರಿವಿರಬೇಕು. ನಮ್ಮ ಕೆಲಸ ರೈತರನ್ನು ಸಂಪರ್ಕಿಸುವುದಾಗಿದೆ. ರೈತರಿಗೆ ವಿಜ್ಞಾನದ ಪ್ರಯೋಜನಗಳನ್ನು ತಕ್ಷಣ ಪಡೆಯಲು, ನಾವು ತಿಂಗಳಿಗೊಮ್ಮೆ ‘ಕಿಸಾನ್ ಕಿ ಬಾತ್’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮ ರೇಡಿಯೋದಲ್ಲಿ ಬರುತ್ತೆ, ವಿಜ್ಞಾನಿಗಳು, ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಏನೇನು ಅವಶ್ಯವಿದೆಯೋ ಅದರ ಬಗ್ಗೆ ಮಾಹಿತಿ ನೀಡುತ್ತಾರೆ. ವಿಜ್ಞಾನಿಗಳೊಂದಿಗೆ ಚರ್ಚೆಗಳು ನಡೆಯುತ್ತವೆ.