alex Certify ಸರ್ಕಾರದಿಂದ ಕನ್ನಡ ಭಾಷೆಗೆ ಹೆಚ್ಚಿನ ಒತ್ತು, ಶೇ 60 ರಷ್ಟು ಕನ್ನಡ ಬಳಕೆ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರದಿಂದ ಕನ್ನಡ ಭಾಷೆಗೆ ಹೆಚ್ಚಿನ ಒತ್ತು, ಶೇ 60 ರಷ್ಟು ಕನ್ನಡ ಬಳಕೆ ಕಡ್ಡಾಯ

ದಾವಣಗೆರೆ : ಕನ್ನಡ ಬಳಕೆಗೆ ಕಾಯಿದೆಯನ್ನು ಮಾಡುವ ಮೂಲಕ ರಾಜ್ಯದಲ್ಲಿ ಕನ್ನಡ ಬೆಳಗುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ತಿಳಿಸಿದರು.

 ಅವರು ಮಂಗಳವಾರ ದಾವಣಗೆರೆ ತಾ; ಹೆಬ್ಬಾಳು ಗ್ರಾಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಏರ್ಪಡಿಸಲಾದ 10 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದನದಲ್ಲಿ ಕನ್ನಡ ಭಾಷೆಯ ಅನುಷ್ಟಾನಕ್ಕೆ ಕಾಯಿದೆ ಮಂಡಿಸಿ ಶೇ 60 ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಲಾಗಿದೆ. ಅದೇ ರೀತಿ ರಾಜ್ಯದಲ್ಲಿನ ಉದ್ದಿಮೆಗಳಲ್ಲಿ ರಾಜ್ಯದ ಜನರಿಗೆ ಶೇ 80 ರಷ್ಟು ಉದ್ಯೋಗ ನೀಡುವಂತಹ ಕಾಯಿದೆಯು ಅನುಷ್ಟಾನವಾಗಬೇಕೆಂದು ಅಭಿಪ್ರಾಯಪಟ್ಟರು.

 ಇಲ್ಲಿನ ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆ ಸಿಗಬೇಕು, ಇದರಿಂದ ರೈತ ಸಶಕ್ತನಾಗಿ ಬದುಕಲು ಸಾಧ್ಯವಾಗಲಿದೆ.  ದಾವಣಗೆರೆ ರಾಜ್ಯದ ಮಧ್ಯಭಾಗದಲ್ಲಿದ್ದು ಇಲ್ಲಿ ಯಾವುದೇ ಇತರೆ ರಾಜ್ಯಗಳ ಭಾಷೆಯ ಪ್ರಭಾವವಿರುವುದಿಲ್ಲ. ಇಲ್ಲಿ ಕನ್ನಡ ಮಾತನಾಡುವವರೇ ಸಿಗುತ್ತಾರೆ. ಅಕ್ಕ ಪಕ್ಕದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಇತರೆ ಭಾಷೆಗಳ ಪ್ರಭಾವ ಇಲ್ಲಿ ಇಲ್ಲ. ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಬೇಕಾಗಿದ್ದು ಮುಂದಿನ ದಿನಗಳಲ್ಲಿ ಈ ಸಮ್ಮೇಳನ ದಾವಣಗೆರೆಯಲ್ಲಿ ನಡೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಮ್ಮೇಳನ ಅಧ್ಯಕ್ಷರಾದ ಬಿ.ಟಿ.ಜಾಹ್ನವಿ ಮಾತನಾಡಿ ಕನ್ನಡ ಭಾಷೆ ಇಂಗ್ಲೀಷ್ ವ್ಯಾಮೋಹದಿಂದಾಗಿ ಕಳೆಗುಂದುತ್ತಿದೆ. ವ್ಯವಹಾರಿಕವಾಗಿ ಕನ್ನಡ ಬಳಕೆ ಕಡಿಮೆ ಆಗುತ್ತಿರುವುದು. ವೃತ್ತಿಪರ ಶಿಕ್ಷಣಕ್ಕೂ, ತಾಂತ್ರಿಕ ಶಿಕ್ಷಣಕ್ಕೂ, ಉದ್ಯೋಗಗಳಿಗೂ ಇವತ್ತು‌ ಇಂಗ್ಲಿಷ್‌ ಭಾಷೆ ಕಡ್ಡಾಯವೇ ಆಗಿದೆ. ಭಾವನಾತ್ಮಕವಾಗಿ ಆವೇಶಗೊಳ್ಳುವ ಬದಲಿಗೆ, ತಾರ್ಕಿಕವಾಗಿ ಚಿಂತಿಸಿ ಕ್ರಿಯಾತ್ಮಕವಾಗಿ ವರ್ತಿಸಬೇಕಿರುವುದು ಇವತ್ತಿನ ಅನಿವಾರ್ಯತೆ. ಶಿಕ್ಷಣ, ಉದ್ಯೋಗಕ್ಕೆ ಭಾಷೆ ಅದೇ ಆಗಿದ್ದರೂ ಮನಸ್ಸು ಕನ್ನಡವೇ ಆಗಿರಲಿ. ಈ ನಿಟ್ಟಿನಲ್ಲಿ, ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿ ಪ್ರತಿಯೊಬ್ಬ ಕನ್ನಡಿಗನ ಹೆಬ್ಬಯಕೆಯಾಗಲಿ.

 ಹೊಸದೊಂದು ಸಾಹಿತ್ಯ ಚಳುವಳಿ ಜಾತ್ಯಾತೀತವಾಗಿ, ಜನಪರವಾಗಿ, ಜಾಗತಿಕ ಆಗುಹೋಗುಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಹಿನ್ನಲೆಯಲ್ಲಿ ಮತ್ತೆ ಸಂಭವಿಸಬೇಕಾಗಿದೆ. ಬದಲಾವಣೆ ಯಾವುದೇ ಆಗಿರಲಿ ಅದು ನಮ್ಮಿಂದಲೇ ಆಗಬೇಕಾಗಿದೆ. ಸಮಾನ ಬದುಕು ನಮ್ಮೆಲ್ಲರ ಹಕ್ಕು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರ ಬೋಧನೆ, ವಚನಗಳು, ಆದರ್ಶ, ಚಿಂತನೆಗಳು ಇಂದಿಗೂ ಪ್ರಸ್ತುತ, ಅವು ನಮ್ಮ ನಡೆ, ನುಡಿಗಳ ಮೂಲಕ ಬದುಕಲ್ಲಿ ಹಾಸು ಹೊಕ್ಕು ಅನ್ಯರಿಗೂ ಬೆಳಕಾಗಬೇಕು.

 ನಾಡು. ನಮ್ಮದು ಚೆಲುವ ಕನ್ನಡನಾಡು. ಕರ್ನಾಟಕ ಎಂದರೆ ಒಂದು ನಂದನ. ಸ್ವರ್ಗದ ಹಾದಿ ಈ ನೆಲದಲ್ಲಿಯೇ ಹುಟ್ಟಿ ಇಲ್ಲಿಯೇ ಮುಗಿಯುತ್ತದೆ. ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಇಲ್ಲಿನ ವಾಸ್ತುಶಿಲ್ಪಗಳಿಗೆ ಮತ್ತು ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕøತಿಯ ಶ್ರೀಮಂತಿಕೆಯನ್ನು ನಾಡಿನ ಇತಿಹಾಸದಲ್ಲಿ ಕಾಣಬಹುದಾಗಿದೆ ಎಂದರು.

 ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪ್ರಾಸ್ತಾವಿಕವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ವಾಮದೇವಪ್ಪ ಮಾತನಾಡಿ ಬರಗಾಲದಿಂದ ಸಮ್ಮೇಳನ ಮುಂದೂಡಬೇಕು ಎಂದುಕೊಂಡಿದ್ದೆವು. ಆದರೆ ಮಹಾಂತ ರುದ್ರೇಶ್ವರರ ಆಶೀರ್ವಾದ   ಹಾಗೂ ಜನರ ಅಪೇಕ್ಷೆಯಿಂದ ಹೆಬ್ಬಾಳು ಗ್ರಾಮದಲ್ಲಿ ಸಮ್ಮೇಳನ ನಡೆಯುತ್ತಿದೆ.   ಸಮ್ಮೇಳನದ ಅಧ್ಯಕ್ಷರು ಪ್ರಗತಿಪರ ಚಿಂತಕರಾಗಿ, ತಮ್ಮ ಸಾಹಿತ್ಯದ ಮೂಲಕ ಈ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಅವರ ಸಾಹಿತ್ಯ ಸೇವೆ ನಿರಂತರವಾಗಲಿ ಎಂದರು.

 ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಿ.ಎನ್. ಮಲ್ಲೇಶ್ ಕನ್ನಡ ಧ್ವಜ ಹಸ್ತಾಂತರಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುಮತಿ ಜಯಪ್ಪ, ತಾ.ಕ.ಸಾ.ಪ ಗೌರವ ಕಾರ್ಯದರ್ಶಿ ದಾಗಿನಕಟ್ಟೆ ಪರಮೇಶ್ವರಪ್ಪ, ಕ.ರಾ.ಸ.ನೌ. ಸಂಘದ ಜಿಲ್ಲಾಧ್ಯಕ್ಷ ವೀರೆಶ್ ಎಸ್. ಒಡೇನಪುರ, ತಾ.ಕ.ಸಾ.ಪ ಗೌರವ ಕಾರ್ಯದರ್ಶಿ ನಾಗರಾಜ ಸಿರಿಗೆರೆ. ಶಿಕ್ಷಕರಾದ ಜಿ.ಹೆಚ್. ತಿಪ್ಪೇಸ್ವಾಮಿ, ಷಡಕ್ಷರಪ್ಪ ಎಂ. ಬೇತೂರು, ಬಿ.ವಿ. ಪರಿಮಳ ಜಗದೀಶ್, ಮಮತ ರುದ್ರಮುನಿ ಸ್ವಾಮಿ, ಎ.ಎಂ. ಸಿದ್ದೇಶ್, ಡಾ.ಎಸ್ ಶಿವಯ್ಯ ಇನ್ನಿತರರು ಉಪಸ್ಧಿತರಿದ್ದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...