ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸಂಕಷ್ಟಕ್ಕೆ ಒಳಗಾದ ಟ್ರಾನ್ಸ್ ಜೆಂಡರ್ ಗಳಿಗೆ ತಲಾ 1500 ರೂಪಾಯಿ ಸಹಾಯಧನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಣಕಾಸು ನೆರವು ಟ್ರಾನ್ಸ್ ಜೆಂಡರ್ ಸಮುದಾಯಕ್ಕೆ ದೈನಂದಿನ ಅಗತ್ಯತೆ ಪೂರೈಸಲು ನೆರವಾಗಲಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತಿಳಿಸಿದೆ.
ಸಹಾಯಧನ ಪಡೆಯುವ ಬಗ್ಗೆ ಜಾಗೃತಿ ಮೂಡಿಸಲು ಟ್ರಾನ್ಸ್ ಜೆಂಡರ್ ಗಳಿಗಾಗಿ ಕೆಲಸ ಮಾಡುವ ಎನ್ಜಿಒಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳಿಗೆ ಸಚಿವಾಲಯ ತಿಳಿಸಿದೆ. ಟ್ರಾನ್ಸ್ ಜೆಂಡರ್ ಸಮುದಾಯದ ಸದಸ್ಯರು ಕೊರೋನಾ ಕಾರಣದಿಂದ ತೀವ್ರವಾಗಿ ಬಾಧಿತರಾಗಿದ್ದಾರೆ. ಅವರ ಜೀವನೋಪಾಯಕ್ಕೆ ಅಡ್ಡಿ ಉಂಟಾಗಿದೆ. ಅವರ ಆಧಾರ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ನೀಡಿ ಹಣಕಾಸಿನ ಸಹಾಯಕ್ಕೆ ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆಯ ವೆಬ್ಸೈಟ್ನಲ್ಲಿ ಅರ್ಜಿ ಲಭ್ಯವಿದೆ.
ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಟ್ರಾನ್ಸ್ ಜೆಂಡರ್ ಗಳಿಗೆ ಕೇಂದ್ರದಿಂದ ಹಣಕಾಸಿನ ನೆರವು ಮತ್ತು ಪಡಿತರ ಕಿಟ್ ನೀಡಲಾಗಿತ್ತು. ಒಟ್ಟು 98 ಲಕ್ಷ ರೂಪಾಯಿ ಪಾವತಿಸಲಾಗಿತ್ತು. ದೇಶಾದ್ಯಂತ ಸುಮಾರು 7,000 ಟ್ರಾನ್ಸ್ ಜೆಂಡರ್ ಗಳು ಪ್ರಯೋಜನ ಪಡೆದುಕೊಂಡಿದ್ದರು.
ಟ್ರಾನ್ಸ್ ಜೆಂಡರ್ ಗಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಸಹಾಯವಾಣಿ ಆರಂಭಿಸಿದೆ. 8882133897 ಸಹಾಯವಾಣಿ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆ ವರೆಗೆ ಕಾರ್ಯನಿರ್ವಹಿಸುತ್ತದೆ. ವೃತ್ತಿಪರ ಮನಃಶಾಸ್ತ್ರಜ್ಞರು ಸಮಾಲೋಚನೆ ನಡೆಸಲಿದ್ದಾರೆ.