ಬೆಂಗಳೂರು: ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಹಾಗೂ ಅಂಗ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮಾತೃತ್ವ(ಹೆರಿಗೆ) ರಜೆ ಸೌಲಭ್ಯವನ್ನು ವಿಸ್ತರಿಸಲಾಗಿದೆ.
ಮಾತೃತ್ವ ರಜೆಯನ್ನು ಪ್ರಾರಂಭದ ದಿನಾಂಕದಿಂದ ಗರಿಷ್ಠ 180 ದಿನಗಳವರೆಗೆ ಮಂಜೂರು ಮಾಡಬಹುದು.
ಗರ್ಭಸ್ರಾವ ಅಥವಾ ಗರ್ಭಪಾತದಿಂದ ಗರ್ಭಧಾರಣೆಯು ಪರ್ಯಾವಸಾನಗೊಂಡ ಸಂದರ್ಭದಲ್ಲಿ ಮಾತೃತ್ವ ರಜೆ 6 ವಾರ ಮೀರಬಾರದು.
ರಜೆಗಾಗಿ ಸಲ್ಲಿಸಿದ ಅರ್ಜಿಯ ನೋಂದಾಯಿತ ವೃತ್ತಿನಿರತ ವೈದ್ಯರಿಂದ ಪಡೆದ ಪ್ರಮಾಣ ಪತ್ರದಿಂದ ಸಮರ್ಥಿತವಾಗಿರಬೇಕು.
ಮಾತೃತ್ವ ರಜೆ ಮೇಲೆ ತೆರಳಲು ನೌಕರರು ರಜೆಯ ನಿಕಟಪೂರ್ವದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮಾನಾದ ವೇತನವನ್ನು ರಜೆಯ ಅವಧಿಯಲ್ಲಿ ಪಡೆಯಲು ಅರ್ಹರಾಗಿರುತ್ತಾರೆ.
ಎರಡು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ಗುತ್ತಿಗೆ ನೌಕರರಿಗೆ ಈ ಮಾತೃತ್ವ ರಜೆ ಮಂಜೂರು ಮಾಡತಕ್ಕದ್ದಲ್ಲ. ಮಾತೃತ್ವ ರಜೆಗಾಗಿ ಸಲ್ಲಿಸುವ ಅರ್ಜಿಯೊಂದಿಗೆ ಸಂಬಂಧಿತ ಗುತ್ತಿಗೆ ಮಹಿಳಾ ನೌಕರರು ಈ ಕುರಿತು ಸ್ವಯಂ ಘೋಷಣೆಯನ್ನು ಮಾತೃತ್ವ ರಜೆ ಮಂಜೂರು ಮಾಡುವ ಅಧಿಕಾರಿಗೆ ಸಲ್ಲಿಸತಕ್ಕದ್ದು.
ಗರಿಷ್ಠ ಆರು ತಿಂಗಳು ರಜೆ ಪಡೆಯಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರದ ಇಲಾಖೆಗಳು, ನಿಗಮ -ಮಂಡಳಿಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿನ ಗುತ್ತಿಗೆ ಆಧಾರಿತ ಮಹಿಳಾ ನೌಕರರಿಗೆ ರಜೆ ಸೌಲಭ್ಯ ಅನ್ವಯವಾಗುತ್ತದೆ. ಎರಡು ಅಥವಾ ಹೆಚ್ಚು ಮಕ್ಕಳಿರುವ ನೌಕರರಿಗೆ ರಜೆ ಸೌಲಭ್ಯ ಅನ್ವಯವಾಗುವುದಿಲ್ಲ. ಈ ಸೌಲಭ್ಯವನ್ನು ಏಪ್ರಿಲ್ 1 ರಿಂದಲೇ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿದೆ ಎಂದು ಹೇಳಲಾಗಿದೆ.