ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಒಲವು ಹೊಂದಿದ್ದು, ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಾಗಿದೆ.
ಧರ್ಮಕ್ಕೊಂದು ನಿಯಮದಿಂದ ದೇಶದ ಏಕತೆಗೆ ದಕ್ಕೆ ಉಂಟಾಗುತ್ತದೆ. ಆಸ್ತಿ, ವಿವಾಹಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಧರ್ಮದವರು ವಿವಿಧ ಕಾನೂನುಗಳನ್ನು ಪಾಲಿಸುತ್ತಿರುವುದು ದೇಶದ ಏಕತೆಗೆ ಧಕ್ಕೆಯಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.
ಹಿರಿಯ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸೇರಿದಂತೆ ಹಲವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಮದುವೆ ವಯಸ್ಸು, ವಿಚ್ಛೇದನಕ್ಕೆ ಕಾರಣವಾಗುವ ಅಂಶಗಳು, ದತ್ತು ಸ್ವೀಕಾರ, ಪೋಷಕತ್ವ ನಿರ್ವಹಣೆ, ಆಸ್ತಿ ಹಕ್ಕು ಮೊದಲಾದವುಗಳ ವಿಚಾರದಲ್ಲಿ ಏಕರೂಪ ಸಂಹಿತೆ ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಕೋರಿದ್ದಾರೆ. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಸ್ತೃತ ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಈ ಬಗ್ಗೆ ಅಫಿಡವಿಟ್ ಸಲ್ಲಿಸುವ ಮೂಲಕ ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮೊದಲ ಬಾರಿಗೆ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದೆ. ಧರ್ಮಕ್ಕೊಂದು ನಿಯಮದಿಂದ ದೇಶದ ಏಕತೆಗೆ ಧಕ್ಕೆಯಾಗುತ್ತಿದ್ದು, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಗತ್ಯವಿದೆ ಎಂದು ಹೇಳಿದೆ.