2ನೇ ತರಗತಿಯವರೆಗೆ ಮಕ್ಕಳಿಗೆ ಹೋಂ ವರ್ಕ್ ನಿಷಿದ್ಧ, ಶಾಲೆಯಲ್ಲಿ ಮಕ್ಕಳಿಗೆ ಲಾಕರ್ ಸೌಕರ್ಯ, ಡಿಜಿಟಲ್ ತೂಕದ ಮಷಿನ್, ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಸೌಕರ್ಯಗಳನ್ನ ಒದಗಿಸುವ ಪ್ರಸ್ತಾವನೆಯನ್ನ ಶಿಕ್ಷಣ ಸಚಿವಾಲಯ ಶಿಫಾರಸ್ಸು ಮಾಡಿದೆ. ಹೊಸ ಶಿಕ್ಷಣ ನೀತಿಯ ಅನುಸಾರ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ತೂಕ ಅವರ ದೇಹದ ತೂಕಕ್ಕಿಂತ ಕನಿಷ್ಟ 10 ಪ್ರತಿಶತದಷ್ಟೂ ಹೆಚ್ಚಿರಬಾರದು ಅಂತಾ ಶಿಕ್ಷಣ ಇಲಾಖೆ ಸಲಹೆ ನೀಡಿದೆ.
ಆಯ್ದ ಪ್ರದೇಶಗಳಲ್ಲಿ ನಡೆಸಿದ ಸಂಶೋಧನಾ ಅಧ್ಯಯನಗಳನ್ನ ಆಧರಿಸಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ದೇಹದ ತೂಕ ಹಾಗೂ ಬ್ಯಾಗ್ನ ತೂಕದ ಅನುಪಾತವನ್ನ ಶಿಕ್ಷಣ ಇಲಾಖೆ ಶಿಫಾರಸು ಮಾಡಿದೆ. ಅಲ್ಲದೇ ಮಕ್ಕಳ ತೂಕ ಹಾಗೂ ಅವರ ಬ್ಯಾಗ್ ತೂಕವನ್ನ ಎಣಿಸಲು ಪ್ರತಿಯೊಂದು ಶಾಲೆಯಲ್ಲೂ ಡಿಜಿಟಲ್ ತೂಕದ ಮಷಿನ್ ಅಳವಡಿಸಬೇಕು ಎಂದೂ ಹೇಳಿದೆ.
ಶಾಲಾ ಬ್ಯಾಗ್ಗಳು ಹಗುರವಾಗಿರಬೇಕು. ಹಾಗೂ ಮಕ್ಕಳ ಭುಜಕ್ಕೆ ಯಾವುದೇ ರೀತಿಯ ಒತ್ತಡ ಬೀಳದಂತೆ ವಿನ್ಯಾಸಗೊಳಿಸಿದ ಬ್ಯಾಗ್ಗಳನ್ನ ಹೊಂದಿರಬೇಕು. ಮೆಟ್ಟಿಲು ಹತ್ತಿ ಇಳಿಯುವಾಗ ಮಕ್ಕಳಿಗೆ ಕಿರಿಕಿರಿಯುಂಟು ಮಾಡುವಂತಹ ಚಕ್ರಗಳುಳ್ಳ ಬ್ಯಾಗ್ಗಳನ್ನ ವಿದ್ಯಾರ್ಥಿಗಳು ಬಳಸದಂತೆ ನೋಡಿಕೊಳ್ಳಬೇಕು.
ಇವೆಲ್ಲದರ ಜೊತೆಗೆ ಶಾಲೆಯಲ್ಲಿ ಮಧ್ಯಾಹ್ನದ ಊಟ ಗುಣಮಟ್ಟದ್ದಾಗಿರಬೇಕು. ಮಕ್ಕಳು ಶಾಲೆಗೆ ನೀರಿನ ಬಾಟಲಿ ಕೊಂಡೊಯ್ಯುವುದನ್ನ ತಪ್ಪಿಸುವ ಸಲುವಾಗಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಿರಬೇಕು. ಇವೆಲ್ಲವೂ ಶಾಲೆಯ ನಿರ್ವಹಣೆ ಮಾಡುವವರ ಜವಾಬ್ದಾರಿ ಎಂದು ಹೇಳಲಾಗಿದೆ.