
ಬೆಂಗಳೂರು: ಓದುವಾಗಲೇ ಉದ್ಯೋಗಾವಕಾಶಕ್ಕೆ ಪೂರಕವಾಗಿ ವಿಸ್ತೃತ ಕೌಶಲ್ಯ ತರಬೇತಿ ನೀಡಲು ರಾಜ್ಯ ಸರ್ಕಾರ ರಾಜ್ಯದ ವಿವಿಧ ಭಾಗಗಳಲ್ಲಿ 7 ಸೆಂಟರ್ ಆಫ್ ಎಕ್ಸಲೆನ್ಸ್ ಆರಂಭಿಸಲು ಯೋಜನೆ ರೂಪಿಸಿದೆ.
ಸರ್ಕಾರಿ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಾಸಂಗದ ಅವಧಿಯಲ್ಲಿಯೇ ಕೌಶಲ್ಯ ತರಬೇತಿ ನೀಡಲಾಗುವುದು. ಇದಕ್ಕಾಗಿ ವಿಶ್ವ ಬ್ಯಾಂಕ್ ನಿಂದ 2500 ಕೋಟಿ ರೂ. ಸಾಲ ನೆರವು, ರಾಜ್ಯ ಸರ್ಕಾರದಿಂದ 750 ಕೋಟಿ ಅನುದಾನ ಬಳಕೆ ಮಾಡಲು ನಿರ್ಧರಿಸಲಾಗಿದೆ. ಜೂನ್ ವೇಳೆಗೆ ವಿಶ್ವ ಬ್ಯಾಂಕ್ ನಿಂದ ಸಾಲ ಯೋಜನೆಗೆ ಅನುಮತಿ ದೊರೆಯುವ ಸಾಧ್ಯತೆ ಇದೆ.
ವಿದ್ಯಾರ್ಥಿಗಳಿಗೆ ಉದ್ಯೋಗ ಲಭ್ಯವಾಗುವ ನಿಟ್ಟಿನಲ್ಲಿ ವಿವಿಧ ಕೈಗಾರಿಕೆಗಳು, ಕಂಪನಿಗಳು, ವಿದೇಶಿ ವಿವಿಗಳೊಂದಿಗೆ ವಿವಿಧ ಉದ್ದೇಶಗಳಿಗೆ ಸುಮಾರು 20 ಒಡಂಬಡಿಕೆ ಮಾಡಿಕೊಂಡಿದ್ದು, ಇದರ ಮುಂದುವರೆದ ಭಾಗವಾಗಿ ವಿಶ್ವ ಬ್ಯಾಂಕ್ ನೆರವೇನಿಂದ ರಾಜ್ಯದ 7 ಕಡೆ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ.
ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಮೆಕಾನಿಕಲ್, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಸೇರಿ ಯಾವೆಲ್ಲ ಉದ್ಯೋಗಗಳಿಗೆ ಸೇರಬಹುದೋ ಅವುಗಳಿಗೆ ಪೂರಕವಾದ ವಿಸ್ತೃತ ಕೌಶಲ ತರಬೇತಿಯನ್ನು ಒಂದೇ ಸೂರಿನಡಿ ನೀಡಲಾಗುವುದು.