ಡಿಯೋರಿಯಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಕಥಿಯಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ತನ್ನ ನೇಮಕಾತಿಗಾಗಿ ನಕಲಿ ದಾಖಲೆಗಳನ್ನು ಬಳಸಿರುವ ವಿಷಯ ಬಹಿರಂಗಗೊಂಡಿದೆ.
ಈ ಶಾಲೆಯಲ್ಲಿ 18 ವರ್ಷ ಸೇವೆ ಸಲ್ಲಿಸಿದ ಬಳಿಕ ಈ ವಿಷಯ ಬಹಿರಂಗಗೊಂಡಿದೆ. ಡಿಯೋರಿಯಾದ ಮೂಲ ಶಿಕ್ಷಣಾಧಿಕಾರಿ ಹರಿಶ್ಚಂದ್ರ ನಾಥ್ ಅವರು ಈಗ ಈ ಶಿಕ್ಷಕನನ್ನು ವಜಾಗೊಳಿಸಿದ್ದಾರೆ. ಈ ನಕಲಿ ಶಿಕ್ಷಕನನ್ನು ಜಿತೇಂದ್ರ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ.
ತನಿಖೆಯ ಸಮಯದಲ್ಲಿ, ಆರೋಪಿ ಶಿಕ್ಷಕ ತಮ್ಮದೇ ಹೆಸರಿನ ವ್ಯಕ್ತಿಯ ದಾಖಲೆಗಳನ್ನು ಬಳಸಿ ಸಿದ್ಧಾರ್ಥನಗರ ಜಿಲ್ಲೆಯ ಪ್ರಾಥಮಿಕ ಶಾಲೆಯಲ್ಲಿ ನಿಯೋಜಿಸಲ್ಪಟ್ಟಿದ್ದಾರೆ ಎಂಬ ಮಾಹಿತಿಯನ್ನು ಹರಿಶ್ಚಂದ್ರ ನಾಥ್ ತಿಳಿಸಿದರು.
ಶಿಕ್ಷಕನ ವಿರುದ್ಧ ಬ್ಲಾಕ್ ಶಿಕ್ಷಣಾಧಿಕಾರಿ ಗೌರಿ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಿಶ್ರಾಗೆ ಪಾವತಿಸಿದ ವೇತನವನ್ನು ಅವರಿಂದ ವಸೂಲಿ ಮಾಡಲಾಗುವುದು ಎಂದು ನಾಥ್ ಹೇಳಿದ್ದಾರೆ. ಅಂದಹಾಗೆ ಈ ಶಿಕ್ಷಕ ಮಾಸಿಕ 70 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದರು. ಈಗ ಎಲ್ಲಾ ವೇತನ ವಾಪಸ್ ಕೊಡಬೇಕಿದೆ!