ಬೆಂಗಳೂರು: ಮಕ್ಕಳ ಭವಿಷ್ಯಕ್ಕೆ ಕಾಂಗ್ರೆಸ್ ಸರ್ಕಾರ ಕಲ್ಲು ಹಾಕಿದೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ನಿರ್ಲಕ್ಷ್ಯದಿಂದ ಶಿಕ್ಷಣ ಇಲಾಖೆ ಅಧೋಗತಿಗೆ ತಲುಪಿ, ಮಕ್ಕಳ ಭವಿಷ್ಯಕ್ಕೆ ಕಲ್ಲು ಬೀಳುವಂತಾಗಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿಫಲತೆಯ ಪರಿಣಾಮ ಸರ್ಕಾರಿ ಶಾಲೆಗಳು ವಿದ್ಯುತ್ ಕಡಿತದ ಆತಂಕ ಎದುರಿಸುತ್ತಿವೆ. ಶಿಕ್ಷಣ ಇಲಾಖೆಯು ಬಾಕಿ ಬಿಲ್ ಪಾವತಿಗೆ ಸೂಚನೆ ಮತ್ತು ಅನುದಾನ ನೀಡದ ಪರಿಣಾಮ ಸಮಸ್ಯೆ ಉದ್ಭವಿಸಿದೆ ಎಂದು ವಾಗ್ದಾಳಿ ನಡೆಸಿದೆ.
ಶಿಕ್ಷಣ ಇಲಾಖೆ ಹಾಗೂ ಇಂಧನ ಇಲಾಖೆಗಳ ನಡುವೆ ಸಮನ್ವಯ ಕೊರತೆ ಮಕ್ಕಳಿಗೆ ಶಾಪವಾಗಿ ಮಾರ್ಪಟ್ಟಿದ್ದು ವಿದ್ಯುತ್ ಕಡಿತಗೊಳಿಸಿದರೆ ಕಂಪ್ಯೂಟರ್ ತರಬೇತಿ, ನೀರು ಪೂರೈಕೆ, ಬಿಸಿಯೂಟ ತಯಾರಿಕೆಗೆ ಸೇರಿದಂತೆ ಇತರ ಚಟುವಟಿಕೆಗಳಿಗೆ ಸಮಸ್ಯೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಸರ್ಕಾರಿ ಶಾಲೆಗಳೆಂದರೆ ಇಷ್ಟೋಂದು ತಾತ್ಸಾರವೇ? ಎಂದು ಬಿಜೆಪಿ ಪ್ರಶ್ನಿಸಿದೆ.