ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳನ್ನು ಇಂಗ್ಲೀಷ್ ಭಾಷೆಯಲ್ಲಿ ಪರಿಣಿತರನ್ನಾಗಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯು ಸ್ಪೋಕನ್ ಇಂಗ್ಲೀಷ್ ತರಗತಿ ಪರಿಚಯಿಸಲಿದೆ.
ಇಂಗ್ಲೀಷ್‌ನಲ್ಲಿ ಮಾತನಾಡುವುದು, ಸಂಭಾಷಣೆ ನಡೆಸುವುದು, ಕತೆ ಹೇಳುವುದು, ಪರಿಸ್ಥಿತಿಯನ್ನು ಇಂಗ್ಲೀಷ್‌ನಲ್ಲಿ ಸಹಪಾಠಿಗಳಿಗೆ ವಿವರಿಸುವುದೂ ಸೇರಿ ದಿನನಿತ್ಯ ಇಂಗ್ಲೀಷ್ ಮಾತನಾಡುತ್ತಲೇ ಆ ಭಾಷೆಯನ್ನು ಸುಲಭವಾಗಿ ಮನದಟ್ಟು ಮಾಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳನ್ನು ರೂಪಿಸಲಾಗುವುದು. ಪ್ರತಿ ಶನಿವಾರ 40 ನಿಮಿಷ ಇಂಗ್ಲಿಷ್ ನಲ್ಲಿ ಮಾತನಾಡುವ ಅಭ್ಯಾಸ ಬೆಳೆಸಲಾಗುವುದು. ವಿದ್ಯಾರ್ಥಿಗಳ ತಂಡ ರಚಿಸಿ ಶಾಲೆಯ ಸಂದರ್ಶನಾರ್ಥಿಗಳಿಗೆ ಶಾಲೆಯ ಕುರಿತು ಸಮಗ್ರವಾಗಿ ಆಂಗ್ಲ ಭಾಷೆಯಲ್ಲಿ ಪರಿಚಯಿಸುವುದನ್ನು ಕಲಿಸುವುದು. ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಂದಲೇ ಇಂಗ್ಲಿಷ್ ನಲ್ಲಿ ನಿರೂಪಣೆ ಮಾಡಿಸಲಾಗುವುದು. 40 ನಿಮಿಷದ ಒಂದು ತರಗತಿಯಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ನಲ್ಲಿ ತಮ್ಮ ಅನುಭವ ಹೇಳಿಕೊಳ್ಳುವ ಮೂಲಕ ಇಂಗ್ಲಿಷ್ ಮಾತನಾಡುವುದನ್ನು ಕಲಿಸಲಾಗುವುದು.