ಕರೆ ಮಾಡುವ ಹಾಗೂ ಸಂದೇಶ ರವಾನಿಸುವ ಸೇವೆ ನೀಡುವ ವಾಟ್ಸಾಪ್, ಜೂಮ್ ಮೊದಲಾದ ಆಪ್ ಗಳು ಇನ್ನು ಮುಂದೆ ಭಾರತದಲ್ಲಿ ಚಟುವಟಿಕೆ ನಡೆಸಲು ಪರವಾನಗಿ ಪಡೆಯುವ ಅಗತ್ಯವಿದೆ. ಈ ಕುರಿತ ಕರಡು ಮಸೂದೆಯನ್ನು ಬುಧವಾರದಂದು ಪ್ರಕಟಿಸಲಾಗಿದೆ.
ಓ ಟಿ ಟಿ ವೇದಿಕೆಗಳು ಕೂಡ ದೂರ ಸಂಪರ್ಕ ಸೇವೆಯ ಒಂದು ಭಾಗ ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದ್ದು, ಹೀಗಾಗಿ ಇವುಗಳು ದೇಶದಲ್ಲಿ ಕಾರ್ಯನಿರ್ವಹಿಸಲು ಪರವಾನಿಗೆಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಹಾಗೆಯೇ ಇಂಟರ್ನೆಟ್ ಸೇವಾ ಕಂಪನಿಗಳು ಮತ್ತು ದೂರಸಂಪರ್ಕ ಕಂಪನಿಗಳ ಶುಲ್ಕ ಮತ್ತು ದಂಡ ಮನ್ನಾ ಮಾಡುವ ಹಾಗೂ ಇಂಟರ್ನೆಟ್ ಸೇವಾ ಕಂಪನಿಯು ತನ್ನ ಪರವಾನಿಗೆಯನ್ನು ಹಿಂದಿರುಗಿಸಿದರೆ ಆ ಕಂಪನಿ ಪಾವತಿಸಿದ ಶುಲ್ಕವನ್ನು ಮರುಪಾವತಿಸುವ ಪ್ರಸ್ತಾವವೂ ಕೂಡ ಕರಡು ಮಸೂದೆಯಲ್ಲಿ ಇದೆ.
ಈ ಕುರಿತಂತೆ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದು, ಸಾರ್ವಜನಿಕರು ಅಕ್ಟೋಬರ್ 20 ರೊಳಗೆ ತಮ್ಮ ಅಭಿಪ್ರಾಯವನ್ನು ತಿಳಿಸಬಹುದಾಗಿದೆ.