ಬೆಂಗಳೂರು: ಪೊಲೀಸ್ ಕಾನ್ ಸ್ಟೆಬಲ್ ಗಳ ಅಂತರ ಜಿಲ್ಲಾ ವರ್ಗಾವಣೆ ನಿಯಮ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದೆ. ವರ್ಗಾವಣೆ ಬಯಸುವ ಪೊಲೀಸರಿಗೆ ಹೀಗಿರುವ 7 ವರ್ಷ ಸೇವಾವಧಿ ಪೂರ್ಣಗೊಳಿಸಬೇಕೆಂಬ ನಿಯಮವನ್ನು 10 ವರ್ಷಕ್ಕೆ ಹೆಚ್ಚಳ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ಕಳೆದ ನಾಲ್ಕು ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿರುವ ಪೊಲೀಸ್ ಕಾನ್ ಸ್ಟೆಬಲ್ ಗಳು ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂತರ ಜಿಲ್ಲಾ ವರ್ಗಾವಣೆ ಅವಧಿಯನ್ನು 10 ವರ್ಷಕ್ಕೆ ಹೆಚ್ಚಳ ಮಾಡಿದ್ದಲ್ಲಿ ಕುಟುಂಬ ಸಹಿತ ಹೋರಾಟ ನಡೆಸಲು ಮುಂದಾಗಿದ್ದಾರೆ. ಮೊದಲಿಗೆ ಎರಡೂವರೆ ವರ್ಷ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿದ ಕಾನ್ ಸ್ಟೆಬಲ್ ಗಳನ್ನು ವರ್ಗಾವಣೆ ಮಾಡಲಾಗುತ್ತಿತ್ತು. ನಂತರ ಮೂರು ವರ್ಷ ಅವಧಿಗೆ ವಿಸ್ತರಿಸಲಾಗಿದ್ದು, 2019 ರಲ್ಲಿ 5 ವರ್ಷ ಸೇವಾ ಅವಧಿ ಪೂರ್ಣಗೊಳಿಸಿದ ಸಿಬ್ಬಂದಿಯನ್ನು ಮಾತ್ರ ಅಂತರ ಜಿಲ್ಲಾ ವರ್ಗಾವಣೆಗೆ ಪರಿಗಣಿಸಲಾಗುವುದಾಗಿ ಆದೇಶ ಹೊರಡಿಸಲಾಗಿತ್ತು. ನಂತರ 7 ವರ್ಷ ಅವಧಿಗೆ ಹೆಚ್ಚಳ ಮಾಡಲಾಗಿದೆ. ಈಗ 10 ವರ್ಷಕ್ಕೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ವರ್ಗಾವಣೆ ಅವಕಾಶ ಸಿಗದ ಕಾರಣ ಪೊಲೀಸರು ಅಸಮಾಧಾನಗೊಂಡಿದ್ದಾರೆ.