ನವದೆಹಲಿ: ಭಾರತೀಯ ಅಂಚೆ ಇಲಾಖೆಯನ್ನು ಸರಕು ಸಾಗಣೆ ಕಂಪನಿಯಾಗಿ ಪರಿವರ್ತಿಸುವ ಮೂಲಕ ಇಲಾಖೆಯ ಆದಾಯವನ್ನು ಶೇ. 50 ರಿಂದ 60ರಷ್ಟು ಹೆಚ್ಚಳ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.
ಕೇಂದ್ರ ದೂರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಈ ಬಗ್ಗೆ ಮಾಹಿತಿ ನೀಡಿದ್ದು, ಗ್ರಾಮೀಣ ಪ್ರದೇಶಗಳ ಮನೆ ಬಾಗಿಲಿಗೆ ಸೇವೆ ತಲುಪಿಸುವ ಸಾಮರ್ಥ್ಯ ಇರುವ ಅಂಚೆ ಇಲಾಖೆ ವೇಗವಾಗಿ ಪ್ರಗತಿ ಕಾಣುತ್ತಿದೆ. ನಮ್ಮ ವಾರ್ಷಿಕ ಆದಾಯ 12,000 ಕೋಟಿ ರೂ ನಷ್ಟಿದೆ. ಮುಂದಿನ 3-4 ವರ್ಷಗಳಲ್ಲಿ ಇದನ್ನು ಶೇಕಡ 50 ರಿಂದ 60ರಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪಬ್ಲಿಕ್ ಆಫೇರ್ಸ್ ಫೋರಂ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂದಿಯಾ, ಸರಕು ಸಾಗಣೆ ಕಂಪನಿಯಾಗಿ ಪರಿವರ್ತಿಸುವ ಮೂಲಕ ಅಂಚೆ ಇಲಾಖೆ ಆದಾಯ ಹೆಚ್ಚಿಸುವ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ಮೊಬೈಲ್ ನೆಟ್‌ವರ್ಕ್ ಹೊಂದಿರದ ದೇಶದ ಸುಮಾರು 25,000 ಹಳ್ಳಿಗಳಿಗೆ ಮುಂದಿನ ವರ್ಷದೊಳಗೆ ಸಂಪರ್ಕ ಕಲ್ಪಿಸಲಾಗುವುದು. ಅಂಚೆ ಇಲಾಖೆಯು ಪ್ರಗತಿಯಲ್ಲಿದೆ. ನಮ್ಮ ವಹಿವಾಟು ವಾರ್ಷಿಕ ಸುಮಾರು 12,000 ಕೋಟಿ ರೂ. ಸಮೀಪದಲ್ಲಿದೆ. ಮುಂದಿನ 3-4 ವರ್ಷಗಳಲ್ಲಿ ಅದನ್ನು ಶೇಕಡಾ 50-60 ರಷ್ಟು ಹೆಚ್ಚಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಭಾರತೀಯ ಅಂಚೆಯ ಆದಾಯವನ್ನು ಹೆಚ್ಚಿಸಲು ಎಲ್ಲಾ ಸಂಭಾವ್ಯ ಸೇವೆಗಳನ್ನು ನೋಡುವುದಾಗಿ ಹೇಳಿದರು.
ನಾವು ಕೇವಲ ಮೇಲ್ ವ್ಯವಹಾರ ಮತ್ತು ಪತ್ರ ವ್ಯವಹಾರದಿಂದ ನಮ್ಮನ್ನು ಪರಿವರ್ತಿಸಿಕೊಳ್ಳಬೇಕು. ನಾವು ನಮ್ಮನ್ನು ಲಾಜಿಸ್ಟಿಕ್ಸ್ ಕಂಪನಿಯಾಗಿ ಪರಿವರ್ತಿಸಬೇಕಾಗಿದೆ. ನಾವು ನಮ್ಮ ಸೇವೆಗಳನ್ನು ಸಾಗಿಸಲು ಬಹು ಮೂಲಗಳನ್ನು ನೋಡಬೇಕಾಗಿದೆ ಎಂದು ಸಿಂಧಿಯಾ ಹೇಳಿದ್ದಾರೆ.