ನವದೆಹಲಿ: ಭಾರತದ ಕೇಂದ್ರ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಜೈಡಸ್ ಕ್ಯಾಡಿಲಾದ ಮೂರು ಡೋಸ್ ಕೋವಿಡ್ -19 ಲಸಿಕೆ ZyCoV-D ಗೆ ತುರ್ತು ಬಳಕೆಗೆ ನೀಡುವಂತೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್(ಸಿಡಿಎಸ್‌ಸಿಒ) ನ ಕೋವಿಡ್ -19 ರ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಗುರುವಾರ ಜೈಡಸ್ ಕ್ಯಾಡಿಲಾ ನೀಡಿದ ಅರ್ಜಿಯ ಬಗ್ಗೆ ಚರ್ಚಿಸಿದೆ. ಮೂರು-ಡೋಸ್ ಕೊರೊನಾವೈರಸ್ ಲಸಿಕೆಗೆ ತುರ್ತು ಬಳಕೆಯ ಅಧಿಕಾರವನ್ನು ನೀಡುವಂತೆ ಶಿಫಾರಸು ಮಾಡಿದೆ.
ಶಿಫಾರಸುಗಳ ಅಂತಿಮ ಅನುಮೋದನೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ಗೆ ಕಳುಹಿಸಲಾಗಿದೆ.
ಅಹಮದಾಬಾದ್ ಮೂಲದ ಫಾರ್ಮಾ ಮೇಜರ್ ಜುಲೈ 1 ರಂದು ಲಸಿಕೆಗಾಗಿ DCGI ಯೊಂದಿಗೆ ತುರ್ತು ಬಳಕೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. ಇದುವರೆಗೆ ಭಾರತದಲ್ಲಿ 50 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಲಸಿಕೆಗಾಗಿ ಅತಿದೊಡ್ಡ ಕ್ಲಿನಿಕಲ್ ಪ್ರಯೋಗವನ್ನು ನಡೆಸಿದೆ ಎಂದು ಕಂಪನಿ ಹೇಳಿದೆ.
ಅನುಮೋದನೆ ಪಡೆದರೆ, ZyCoV-D ವಿಶ್ವದ ಮೊದಲ ಡಿಎನ್ಎ ಲಸಿಕೆಯಾಗಿದೆ. ಕೊರೋನಾ ವೈರಸ್ ಸೋಂಕಿನ ವಿರುದ್ಧ ಸೀರಮ್ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್, ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್ -ವಿ ನಂತರ ದೇಶದಲ್ಲಿ ಬಳಕೆಗೆ ಅನುಮೋದನೆ ಪಡೆದ 6 ನೇ ಲಸಿಕೆಯಾಗಿದೆ. ಅಮೆರಿಕ ನಿರ್ಮಿತ ಮಾಡೆರ್ನಾ, ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗಳಿಗೆ ಅನುಮತಿ ಸಿಕ್ಕಿದೆ.
ಪ್ಲಾಸ್ಮಿಡ್ ಡಿಎನ್ಎ ಆಧಾರಿತ ಜೈಕೋವ್ -ಡಿ ಅನ್ನು ಸೂಜಿ ಮುಕ್ತ ಇಂಜೆಕ್ಟರ್ ಬಳಸಿ ಇಂಟ್ರಾಡರ್ಮಲ್ ಆಗಿ ನಿರ್ವಹಿಸಬೇಕು. ಕ್ಯಾಡಿಲಾ ಹೆಲ್ತ್ ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಶರ್ವಿಲ್ ಪಟೇಲ್, ಲಸಿಕೆಗೆ ಅನುಮೋದನೆ ಸಿಕ್ಕರೆ ವಯಸ್ಕರಿಗೆ ಮಾತ್ರವಲ್ಲದೆ, 12 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಿಗೂ ನೀಡಲಾಗುವುದು ಎಂದು ಹೇಳಿದ್ದರು.