ಬೆಂಗಳೂರು: ಭ್ರಷ್ಟಾಚಾರ ಮುಕ್ತ ಅಭಿಯಾನದ ಭಾಗವಾಗಿ ಖಾಸಗಿ ಸಂಸ್ಥೆಯೊಂದು ಅಕ್ಟೋಬರ್ 2 ರಿಂದ 20ರವರೆಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ‘ನನಗೆ ಯಾರೂ ಲಂಚ ಕೊಡಬೇಕಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ’ ಎಂಬ ನಾಮಫಲಕ ಅಳವಡಿಸಿಕೊಳ್ಳುವಂತೆ ಮನವಿ ಮಾಡಿದೆ.
ಈ ಮನವಿ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಕಚೇರಿಯು ಆಡಳಿತ ಮತ್ತು ಸುಧಾರಣೆ ಇಲಾಖೆಗೆ ಸೂಚನೆ ನೀಡಿದೆ. ಖಾಸಗಿ ಸಂಸ್ಥೆಯ ಮನವಿಯಂತೆ ಸಿಎಂ ಕಚೇರಿ ಆದೇಶ ನೀಡಿದ್ದು, ಅಕ್ಟೋಬರ್ 2 ರಿಂದ 20 ರವರೆಗೆ ‘ನನಗೆ ಯಾರೂ ಲಂಚ ಕೊಡಬೇಕಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ’ ಎಂಬ ಫಲಕಗಳನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವಂತೆ ತಿಳಿಸಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಟಿಪ್ಪಣಿ ಹೊರಡಿಸಿದ್ದಾರೆ.
ಸಿಟಿಜನ್ ಎನ್ ಕ್ವೈರಿ ಕೌನ್ಸಿಲ್ ಮತ್ತು ಸಿಇಸಿ ಟ್ರಸ್ಟ್ ವತಿಯಿಂದ ಅಭಿಯಾನ ಆಯೋಜಿಸಿದ್ದು, ಈ ಅವಧಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಾಮಫಲಕ ಅಳವಡಿಸಲು ಆದೇಶ ಹೊರಡಿಸುವ ಮೂಲಕ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅಭಿಯಾನ ಯಶಸ್ವಿಗೊಳಿಸುವಂತೆ ತಿಳಿಸಲಾಗಿದೆ.