ಸೈಬರ್ ಅಪರಾಧವನ್ನ ಹತೋಟಿಗೆ ತರುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯದ ಅಪರಾಧ ವಿಭಾಗವು ಹೊಸ ಕಾರ್ಯಕ್ರಮವೊಂದನ್ನ ರಚಿಸಿದೆ. ಇದರ ಅಡಿಯಲ್ಲಿ ದೇಶದ ಜನತೆ ಸ್ವಯಂಪ್ರೇರಿತರಾಗಿ ಭಾಗಿಯಾಗಬಹುದಾಗಿದೆ.
ಸರ್ಕಾರಿ ವಿರೋಧಿ, ಮಕ್ಕಳ ಅಶ್ಲೀಲ ವಿಡಿಯೋ, ಅತ್ಯಾಚಾರ, ಭಯೋತ್ಪಾದನೆ ಸೇರಿದಂತೆ ಅಪರಾಧ ಕೃತ್ಯಗಳನ್ನ ಪ್ರಚೋದಿಸುವ ವಿಡಿಯೋಗಳು ಕಂಡು ಬಂದಲ್ಲಿ ಈ ಬಗ್ಗೆ ಸರ್ಕಾರಕ್ಕೆ ವರದಿ ಮಾಡಬಹುದಾಗಿದೆ.
ಈ ಕಾರ್ಯಕ್ರಮದ ಪ್ರಾಯೋಗಿಕ ಹಂತವನ್ನ ಜಮ್ಮು & ಕಾಶ್ಮೀರ ಹಾಗೂ ತ್ರಿಪುರದಲ್ಲಿ ನಡೆಸಲಾಗುತ್ತದೆ. ಅಲ್ಲಿನ ಪ್ರತಿಕ್ರಿಯೆಗಳನ್ನ ಗಮನಿಸಿ ಕಾರ್ಯಕ್ರಮದ ಮುಂದಿನ ಹಂತವನ್ನ ಅನುಷ್ಠಾನ ಮಾಡಲಾಗುತ್ತೆ ಎಂದು ವರದಿ ತಿಳಿಸಿದೆ.
ಈ ಕಾರ್ಯಕ್ರಮದ ಅಡಿಯಲ್ಲಿ ಎಂಹೆಚ್ಎ ಭಾರತೀಯ ಸೈಬರ್ ಕ್ರೈಂ ಸಮನ್ವಯ ಕೇಂದ್ರವು ನೋಡಲ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ. ಕೇಂದ್ರ ಸರ್ಕಾರದ ಈ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಬೇಕೆಂದು ಇಚ್ಚಿಸುವವರು ತಮ್ಮ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ವಿಳಾಸ ಸೇರಿದಂತೆ ವಿವಿಧ ವೈಯಕ್ತಿಕ ವಿವರಗಳನ್ನ ಒದಗಿಸಬೇಕಾಗುತ್ತದೆ.
ರಾಷ್ಟ್ರ ವಿರೋಧಿ ಚಟುವಟಿಕೆ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅನ್ನೋದ್ರ ಬಗ್ಗೆ ಸರ್ಕಾರ ಇನ್ನೂ ಸ್ವಷ್ಟ ಕಾನೂನು ಚೌಕಟ್ಟನ್ನ ಹೊಂದಿಲ್ಲ. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೂ ಗೃಹ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.