ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒನ್ ನೇಷನ್ ಒನ್ ರೇಷನ್ ಕಾರ್ಡ್ ಫಲಾನುಭವಿಗಳಿಗೆ ನೆರವಾಗುವಂತೆ ‘ಮೇರಾ ರೇಷನ್ ಆಪ್’ ಬಿಡುಗಡೆಮಾಡಿದೆ.
ಒನ್ ನೇಷನ್ ಒನ್ ರೇಷನ್ ಕಾರ್ಡ್ ವ್ಯವಸ್ಥೆ ಪಡಿತರ ಫಲಾನುಭವಿಗಳಿಗೆ ಅನುಕೂಲವಾಗುವಂತಹ ಪ್ರಮುಖ ನಾಗರಿಕ ಕೇಂದ್ರಿತ ಯೋಜನೆಯಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಇತರೆ ಕಲ್ಯಾಣ ಯೋಜನೆಗಳ ಅಡಿಯಲ್ಲಿ ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ದೇಶದ ಯಾವುದೇ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಪ್ರಸ್ತುತ ‘ಮೇರಾ ರೇಷನ್ ಆಪ್’ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈಶಿಷ್ಟಗಳನ್ನು ಅಪ್ಲಿಕೇಶನ್ನಲ್ಲಿ ಸೇರಿಸಲಾಗುವುದು. ಅಲ್ಲದೇ, 14 ಭಾಷೆಗಳಲ್ಲಿ ಶೀಘ್ರವೇ ಆಪ್ ಲಭ್ಯವಿರಲಿದೆ ಎಂದು ಹೇಳಲಾಗಿದೆ.
ಮೇರಾ ರೇಷನ್ ಅಪ್ಲಿಕೇಶನ್ ನಿಂದ ಸಿಗುವ ಪ್ರಯೋಜನಗಳು:
ಸಮೀಪದ ನ್ಯಾಯಬೆಲೆ ಅಂಗಡಿಗಳನ್ನು ಹುಡುಕುವುದು
ಆಹಾರ ಧಾನ್ಯ ಪಡೆಯುವ ಅರ್ಹತೆ ಪರಿಶೀಲನೆ
ಇತ್ತೀಚಿನ ವ್ಯವಹಾರಗಳು
ಆಧಾರ್ ಜೋಡಣೆ ಸ್ಥಿತಿಗತಿ
ವಲಸಿಗರು ತಮ್ಮ ವಲಸೆ ವಿವರಗಳನ್ನು ಆಪ್ ಮೂಲಕ ನೋಂದಾಯಿಸಿಕೊಳ್ಳಬಹುದು
ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಿಂದಾಗಿ ಕಾರ್ಮಿಕರು, ದೈನಂದಿನ ಕೂಲಿಕಾರ್ಮಿಕರು, ನಗರಪ್ರದೇಶದ ಬಡವರು, ಬೀದಿ ಬದಿ ನಿವಾಸಿಗಳು, ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುವವರು, ಗೃಹ ಕಾರ್ಮಿಕರು ಸೇರಿದಂತೆ ಹಲವರಿಗೆ ಪಡಿತರ ಪ್ರಯೋಜನ ಸಿಗಲಿದೆ.
ಸೋರಿಕೆ ತಡೆಗಟ್ಟಿ ಪಡಿತರ ಚೀಟಿ ಹೊಂದಿದವರು ದೇಶದ ಯಾವುದೇ ರಾಜ್ಯದಲ್ಲಿ ಪೋರ್ಟಬಲಿಟಿ ಖಚಿತಪಡಿಸಿಕೊಂಡು ಪಡಿತರ ಪಡೆಯಬಹುದಾಗಿದೆ. ಎಲ್ಲಾ ಪಡಿತರ ಚೀಟಿ ಸದಸ್ಯರ ಆಧಾರ್ ಜೋಡಣೆ, ಬಯೋಮೆಟ್ರಿಕ್ ದೃಢೀಕರಣದೊಂದಿಗೆ ದೇಶದ ಯಾವುದೇ ನ್ಯಾಯಯುತ ಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಬಹುದಾಗಿದೆ ಎನ್ನಲಾಗಿದೆ.