ಬೆಂಗಳೂರು: ಆಡಳಿತವನ್ನು ಪರಿಣಾಮಕಾರಿಯಾಗಿಸಿ ಸರ್ಕಾರದ ಸೇವೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದ್ದು, 30,000 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯದಲ್ಲಿ ಸುಮಾರು 2.58 ಲಕ್ಷ ಹುದ್ದೆಗಳು ಖಾಲಿ ಇವೆ. ನೌಕರರ ಮೇಲಿನ ಕಾರ್ಯದೊತ್ತಡ ಕಡಿಮೆ ಮಾಡಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಹಿಂದಿನಿಂದಲೂ ಒತ್ತಾಯ ಕೇಳಿ ಬರುತ್ತಿದೆ. ಈಗ ಸರ್ಕಾರ ನೇಮಕಾತಿಗೆ ಆದ್ಯತೆ ನೀಡಿದ್ದು, ಕೃಷಿ, ಪಶು ಸಂಗೋಪನೆ, ಜಲಸಂಪನ್ಮೂಲ, ಆರೋಗ್ಯ ಇಲಾಖೆ, ಲೋಕೋಪಯೋಗಿ, ಕಾನೂನು, ಹಣಕಾಸು, ಕಂದಾಯ, ಗ್ರಾಮೀಣಾಭಿವೃದ್ಧಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ನಿಗಮಗಳಲ್ಲಿ ನೇಮಕಾತಿ ನಡೆಸಲಾಗುವುದು. ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಜನಸಂಖ್ಯೆ 3 ಕೋಟಿ ಇದ್ದಾಗ 7.69 ಲಕ್ಷ ಹುದ್ದೆಗಳು ಮಂಜೂರಾಗಿವೆ. ಈಗ ರಾಜ್ಯದ ಜನಸಂಖ್ಯೆ 7 ಕೋಟಿ ತಲುಪಿದ್ದರೂ, ಹುದ್ದೆಗಳ ಸಂಖ್ಯೆ ಹೆಚ್ಚಾಗಿಲ್ಲ. 2.58 ಲಕ್ಷ ಹುದ್ದೆಗಳು ಖಾಲಿ ಇದ್ದು, ಪ್ರತಿ ವರ್ಷ ಸುಮಾರು 15 ಸಾವಿರ ನೌಕರರು ನಿವೃತ್ತರಾಗುತ್ತಾರೆ.
ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳ ಮೂಲಕ ನೇಮಕಾತಿ ಪರೀಕ್ಷೆ ನಡೆಸಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು. ಇಲಾಖೆಗಳು ಕೂಡ ನೇರವಾಗಿ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಲಿವೆ ಎಂದು ಹೇಳಲಾಗಿದೆ.