ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಡಿಜಿಟಲ್ ಟಚ್ ನೀಡಲು ಮುಂದಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಸರು ನೋಂದಣಿ, ಪಾವತಿ ವ್ಯವಸ್ಥೆಗೆ ಡಿಜಿಟಲ್ ವ್ಯವಸ್ಥೆ ಕಲ್ಪಿಸಲಾಗುವುದು. ಒಂದು ತಿಂಗಳ ಒಳಗೆ ಹೆಸರು ನೋಂದಣಿ, ಪಾವತಿ ವ್ಯವಸ್ಥೆ ಡಿಜಿಟಲ್ ರೂಪಕ್ಕೆ ಬರಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು, ಮೊದಲಿಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಟಚ್ ನೀಡಲಿದ್ದು, ನಂತರ ಹಂತ ಹಂತವಾಗಿ ತಾಲೂಕು ಆಸ್ಪತ್ರೆಗಳಲ್ಲಿಯೂ ಇದೆ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಭೇಟಿಗೆ ಆನ್ಲೈನ್ ಅಥವಾ ಮೊಬೈಲ್ ಸಂದೇಶದ ಮೂಲಕ ಸಮಯ ನಿಗದಿಕೊಳ್ಳಬಹುದು. ಡಿಜಿಟಲ್ ಪಾವತಿ ಮಾಡಬಹುದು. ಇದರಿಂದ ಆಸ್ಪತ್ರೆಯಲ್ಲಿ ಜನದಟ್ಟಣೆ, ಸಮಯ ಕಡಿಮೆ ಮಾಡಬಹುದಾಗಿದೆ. ಅಲ್ಲದೆ, ವೈದ್ಯರ ಭೇಟಿಗೆ ಅಲೆದಾಟ ಕೂಡ ತಪ್ಪಿಸಬಹುದು ಎಂದರು.