ನವದೆಹಲಿ: ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ ಮತ್ತು ಹೈದರಾಬಾದ್-ಬೆಂಗಳೂರು ಹೆದ್ದಾರಿಯಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲು ಎರಡು ಪ್ರಾಯೋಗಿಕ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಇಂದು ಲೋಕಸಭೆಯಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಒಟ್ಟು 1880 ಕಿ.ಮೀ. ಪ್ರಾಯೋಗಿಕ ಯೋಜನೆಗಳ ಅನುಭವ ಮತ್ತು ಕಲಿಕೆ ಮತ್ತು ಕಾರ್ಯಸಾಧ್ಯತೆಯ ಅಧ್ಯಯನದ ಫಲಿತಾಂಶಗಳ ಆಧಾರದ ಮೇಲೆ ದೇಶದ ರಾಷ್ಟ್ರೀಯ ಹೆದ್ದಾರಿಗಳ ಜಾಲಕ್ಕೆ ಒಎಫ್‌ಸಿ ಹಾಕುವ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಹೇಳಿದರು.
ದೆಹಲಿ-ಮುಂಬೈ ಎಕ್ಸ್ ಪ್ರೆಸ್‌ವೇ ಯನ್ನು 16 ಲೇನ್‌ಗಳಿಗೆ ವಿಸ್ತರಿಸಲು 120 ಮೀಟರ್‌ಗಳಷ್ಟು ಅಗಲದಲ್ಲಿ ಭೂಮಿ ಲಭ್ಯವಿದೆ, ಜೊತೆಗೆ ಬುಲೆಟ್ ರೈಲುಗಳು ಮತ್ತು ಹೈಪರ್ ಲೂಪ್‌ಗಾಗಿ ಟ್ರ್ಯಾಕ್ ನಿರ್ಮಿಸಲು ಬಳಕೆ ಮಾಡಿಕೊಳ್ಳಲಾಗುವುದು ಎಂದರು.
ದೆಹಲಿ-ಜೈಪುರ ಎಕ್ಸ್ ಪ್ರೆಸ್ ವೇನಲ್ಲಿ ಇ-ಹೈವೇ ಮಾಡುವ ಪ್ರಾಯೋಗಿಕ ಯೋಜನೆಯು ಟ್ರಕ್ ಗಳು ಮತ್ತು ಬಸ್ ಗಳಿಗೆ ಓವರ್ ಹೆಡ್ ಎಲೆಕ್ಟ್ರಿಕ್ ಕೇಬಲ್‌ಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.