ಬೆಂಗಳೂರು: ಕೊರೋನಾ ಮೂರನೇ ಅಲೆ ಆತಂಕದ ಹಿನ್ನಲೆಯಲ್ಲಿ ಗಣಪತಿ ಹಬ್ಬ ಮತ್ತು ಮೊಹರಂ ಆಚರಣೆಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆಗೆ ನಿರ್ಬಂಧ ಹೇರಲಾಗಿದೆ. ಗಣೇಶಮೂರ್ತಿ ತರುವಾಗ, ವಿಸರ್ಜನೆ ವೇಳೆ ಮೆರವಣಿಗೆ ನಿಷೇಧಿಸಲಾಗಿದೆ.
ಗಣಪತಿ ಹಬ್ಬಕ್ಕೆ ನಿರ್ಬಂಧ:
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬ್ರೇಕ್ ಹಾಕಲಾಗಿದ್ದು, ಗಣಪತಿ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪೆಂಡಾಲ್ ಗಳನ್ನು ಹಾಕಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಗಣಪತಿ ವಿಸರ್ಜನೆ ಮಾಡುವಾಗ ಮೆರವಣಿಗೆ ನಡೆಸುವಂತಿಲ್ಲ.
ಗಣಪತಿ ಹಬ್ಬ ಆಚರಿಸುವ ದೇವಾಲಯಗಳಲ್ಲಿ ನಿತ್ಯವೂ ಸ್ಯಾನಿಟೈಸೇಶನ್ ಮಾಡಬೇಕು. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೇವಾಲಯಗಳಲ್ಲಿ ಭಕ್ತರಿಗೆ ಕನಿಷ್ಠ 6 ಅಡಿ ದೈಹಿಕ ಅಂತರ ಪಾಲನೆ ಕಡ್ಡಾಯವಾಗಿರುತ್ತದೆ. ದೇವಾಲಯದ ಹೊರಾಂಗಣದಲ್ಲಿ ಚಪ್ಪರ, ಪೆಂಡಾಲ್, ಶಾಮಿಯಾನ, ವೇದಿಕೆ ನಿರ್ಮಾಣ ಮಾಡುವಂತಿಲ್ಲ. ವಿಸರ್ಜನೆ ಸಂದರ್ಭದಲ್ಲಿ ಮನರಂಜನೆ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿದೆ.
ಮೊಹರಂ ಆಚರಣೆಗೆ ನಿರ್ಬಂಧ:
ಮೊಹರಂ ಆಚರಣೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಆಲಂ/ಪಂಜಾ ಮತ್ತು ತಾಜಿಯತ್ ಗಳನ್ನು ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೊಹರಂ ಪ್ರಾರ್ಥನಾ ಸಭೆ, ಮೆರವಣಿಗೆ ನಿಷೇಧಿಸಲಾಗಿದೆ. ಸೂಕ್ತ ದೈಹಿಕ ನಂತರ ಪಾಲಿಸಬೇಕಿದೆ. ಕನಿಷ್ಠ ಸಂಖ್ಯೆಯ ಜನರು ಭಾಗಿಯಾಗಬೇಕು.
ಆಲಂ/ಪಂಜಾ ಮತ್ತು ತಾಜಿಯತ್ ಗಳನ್ನು ಮುಟ್ಟುವಂತಿಲ್ಲ. ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. 10 ವರ್ಷದೊಳಗಿನ ಮಕ್ಕಳು, 60 ವರ್ಷ ಮೇಲ್ಪಟ್ಟವರು ಮನೆಯೊಳಗೆ ಇರಬೇಕು. ಪ್ರಾರ್ಥನೆಯ ಸಂದರ್ಭದಲ್ಲಿ ಕನಿಷ್ಠ 6 ಅಡಿ ದೈಹಿಕ ಅಂತರ ಕಡ್ಡಾಯವಾಗಿರುತ್ತದೆ. ಮಸೀದಿಗಳನ್ನು ಹೊರತುಪಡಿಸಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದೆ. ಸಭಾಂಗಣ ಮತ್ತು ಸಮುದಾಯ ಭವನಗಳಲ್ಲಿ ಪ್ರಾರ್ಥನೆಗೆ ನಿರ್ಬಂಧವಿದೆ ಎಂದು ಹೇಳಲಾಗಿದೆ.