
ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.
ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಕ್ರಿಯಾಲ್ ನಿಶಾಂಕ್ ನೇತೃತ್ವದಲ್ಲಿ ಗುರುವಾರದಂದು ನಡೆದ ನವೋದಯ ವಿದ್ಯಾಲಯದ 40 ನೇ ವಾರ್ಷಿಕ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ನವೋದಯ ಶಾಲೆಗಳ ಪ್ರವೇಶಾತಿ ವೇಳೆ ಈಶಾನ್ಯ, ಹಿಮಾಲಯ ಹಾಗೂ ಜಮ್ಮು ಕಾಶ್ಮೀರ ಭಾಗಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವ ಕುರಿತು ನಿರ್ಧರಿಸಲಾಗಿದೆ. ಅಲ್ಲದೇ ಒಂಭತ್ತನೇ ತರಗತಿ ಬಳಿಕದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಟ್ಯಾಬ್ಲೆಟ್ ನೀಡಲು ತೀರ್ಮಾನಿಸಲಾಗಿದೆ.
6 ರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡುವ ಜೊತೆಗೆ ಮುಂದಿನ ವರ್ಷದಿಂದ ಹೊಸ ಪ್ರವೇಶಾತಿ ನೀತಿ, ಇಂಜಿನಿಯರಿಂಗ್ ಹುದ್ದೆಗಳ ನೇಮಕಾತಿ ನಿಯಮದಲ್ಲಿ ಬದಲಾವಣೆ ಮಾಡಲಾಗುವುದು. ಸ್ವಯಂ ಸೇವಾ ಸಂಸ್ಥೆಗಳ ನಿಧಿಯನ್ನು ಹಾಸ್ಟೆಲ್ ಹಾಗೂ ಶಾಲೆಗಳ ಅಭಿವೃದ್ದಿಗೆ ಬಳಕೆ, ಅನುಕೂಲಸ್ಥ ಹಳೆ ವಿದ್ಯಾರ್ಥಿಗಳು ತಾವು ಓದಿದ ಶಾಲೆಯನ್ನು ದತ್ತು ಪಡೆಯಲು ಪ್ರೋತ್ಸಾಹ ನೀಡಲು ತೀರ್ಮಾನಿಸಲಾಗಿದೆ.
ನವೋದಯ ವಿದ್ಯಾಲಯಗಳ ಸಮಗ್ರ ಅಭಿವೃದ್ದಿಗಾಗಿ ರೂಪುರೇಷೆಗಳನ್ನು ರೂಪಿಸಲು ತೀರ್ಮಾನ ಕೈಗೊಳ್ಳಲಾಗಿದ್ದು, ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಕೈಗೊಂಡಿರುವ ಕ್ರಮಗಳನ್ನು ಮುಂದುವರೆಸಲಾಗುತ್ತದೆ. ಅಲ್ಲದೆ ಡಿಜಿಟಲ್ ಕಲಿಕೆಗೆ ಒತ್ತು ನೀಡುವ ಸಲುವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.