ಬೆಂಗಳೂರು: ಕಾರ್ಮಿಕರ ಮಕ್ಕಳಿಗೆ ವಿಮಾನ ಚಾಲನೆ ತರಬೇತಿಯನ್ನು ಉಚಿತವಾಗಿ ನೀಡಲು ಕಾರ್ಮಿಕ ಇಲಾಖೆ ಚಿಂತನೆ ನಡೆಸಿದೆ.
ವಿಮಾನ ಚಾಲನೆ ಪರವಾನಿಗೆ ತರಬೇತಿ ಪಡೆಯಲು ಶ್ರೀಮಂತರಿಗೆ ಮಾತ್ರ ಸಾಧ್ಯ ಎನ್ನುವಂತಾಗಿದೆ. 18 ತಿಂಗಳ ಅವಧಿಯ ಈ ಕೋರ್ಸ್ ಗೆ ಸುಮಾರು 40 ಲಕ್ಷ ರೂಪಾಯಿ ಖರ್ಚಾಗುತ್ತದೆ ಎನ್ನಲಾಗಿದ್ದು, ಇಷ್ಟೊಂದು ದುಬಾರಿ ಶುಲ್ಕ ಭರಿಸಿ ಬಡವರ ಮಕ್ಕಳು ಪೈಲೆಟ್ ತರಬೇತಿ ಪಡೆಯುವುದು ಅಸಾಧ್ಯವಾಗಿದ್ದು, ಹೀಗಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ವಿಮಾನ ಚಾಲನೆ ತರಬೇತಿ ನೀಡಲು ಕಾರ್ಮಿಕ ಇಲಾಖೆ ನಿರ್ಧರಿಸಿದೆ.
ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 30 ಮಕ್ಕಳಿಗೆ ಪೈಲಟ್ ತರಬೇತಿ ನೀಡಲಿದ್ದು, ಜಕ್ಕೂರು ವಿಮಾನ ನಿಲ್ದಾಣದ ಸರ್ಕಾರಿ ವೈಮಾನಿಕ ಶಾಲೆಯ ನಿರ್ದೇಶಕರಿಗೆ ಪತ್ರ ಬರೆದು ಪ್ರಸ್ತಾವನೆ ಸಲ್ಲಿಕೆಗೆ ಕೋರಲಾಗಿದೆ. ಬಜೆಟ್ ನಲ್ಲಿ ಈ ಯೋಜನೆಗೆ 70 ಕೋಟಿ ರೂ. ಮೀಸಲಿಡಲಾಗಿದ್ದು, ಈ ಯೋಜನೆಯಡಿ ಕಾರ್ಮಿಕರ ಮಕ್ಕಳಿಗೆ ಪೈಲಟ್ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.