ನವದೆಹಲಿ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ 102 ನೇ ತಿದ್ದುಪಡಿ ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪು ಮರುಪರಿಶೀಲನೆಗೆ ಕೇಂದ್ರ ಸರ್ಕಾರದಿಂದ ಮೇಲ್ಮನವಿ ಸಲ್ಲಿಸಲಾಗಿದೆ.
ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಅದಿಕಾರ ರಾಜ್ಯಗಳಿಗೆ ಇಲ್ಲ ಎಂದು ಹೇಳುವ ಸಂವಿಧಾನದ 102ನೇ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ತೀರ್ಪಿನ ಮರುಪರಿಶೀಲನೆಗೆ ಕೇಂದ್ರ ಸರ್ಕಾರದಿಂದ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದೆ.
ಮರಾಠ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಲು ಮಹಾರಾಷ್ಟ್ರ ಸರ್ಕಾರ ರೂಪಿಸಿದ್ದ ಕಾಯ್ದೆಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ಸದಸ್ಯರ ಪೀಠ ರದ್ದುಪಡಿಸಿತ್ತು. ಸಂವಿಧಾನದ 102 ನೇ ತಿದ್ದುಪಡಿಯನ್ನು 3:2 ಅನುಪಾತದಲ್ಲಿ ಎತ್ತಿಹಿಡಿದು ತೀರ್ಪು ಕೊಡಲಾಗಿತ್ತು.
ಕೇಂದ್ರ ಸರ್ಕಾರ ಸಂವಿಧಾನದ 102ನೇ ತಿದ್ದುಪಡಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಅಧಿಕಾರವನ್ನು ರಾಜ್ಯಗಳಿಂದ ಕಸಿದುಕೊಳ್ಳುವುದಿಲ್ಲ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿಲ್ಲದ ಕಾರಣದಿಂದ ತೀರ್ಪು ಮರುಪರಿಶೀಲಿಸಬೇಕೆಂದು ಕೇಂದ್ರದಿಂದ ಸಲ್ಲಿಸಿರುವ ಮೇಲ್ಮನವಿಯಲ್ಲಿ ಮನವಿ ಮಾಡಲಾಗಿದೆ.