ಬೆಂಗಳೂರು: ಇತ್ತೀಚೆಗಷ್ಟೇ ಭೂಮಾಪನ, ಹದ್ದುಬಸ್ತು, ನಕ್ಷೆ, ಭೂ ಪರಿವರ್ತನೆ, ತತ್ಕಾಲ್ ಪೋಡಿ ಶುಲ್ಕವನ್ನು ಹೆಚ್ಚಳ ಮಾಡಲಾಗಿತ್ತು. ಈಗ ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ವಿತರಿಸಲಾಗುವ ಪ್ರಮಾಣಪತ್ರಗಳ ಶುಲ್ಕವನ್ನು ಸರ್ಕಾರ ಹೆಚ್ಚಳ ಮಾಡಿದೆ.
ಆರ್.ಟಿ.ಸಿ., ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಬೇರೆ ಪ್ರಮಾಣ ಪತ್ರಗಳಿಗೆ ನಿಗದಿಪಡಿಸಿದ್ದ ಶುಲ್ಕವನ್ನು 25 ರೂ.ನಿಂದ 40 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಕಂದಾಯ ಇಲಾಖೆ ಸೇವೆಯ ಶುಲ್ಕವನ್ನು ಇತ್ತೀಚೆಗಷ್ಟೇ ಹೆಚ್ಚಳ ಮಾಡಿದ್ದು, ಮೊದಲೇ ಸಂಕಷ್ಟದಲ್ಲಿ ರೈತರು ಮತ್ತು ಜನಸಾಮಾನ್ಯರಿಗೆ ಮತ್ತೆ ಶುಲ್ಕ ಹೆಚ್ಚಳ ಬರೆ ಬಿದ್ದಿದೆ.
ಜಾತಿ, ಆದಾಯ ಪ್ರಮಾಣ ಪತ್ರ, ವಂಶವೃಕ್ಷ, ವ್ಯವಸಾಯಗಾರ ದೃಢೀಕರಣ, ಆರ್.ಟಿ.ಸಿ. ಸೇರಿದಂತೆ 54 ಸೇವೆಗಳಿಗಾಗಿ ಪ್ರತಿದಿನ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸುತ್ತಾರೆ. ಪ್ರತಿ ಪ್ರಮಾಣಪತ್ರಕ್ಕೆ 40 ರೂ.ಗೆ ಶುಲ್ಕ ಹೆಚ್ಚಳ ಮಾಡಿದ್ದು, ಫೆಬ್ರವರಿ 7 ರಿಂದ ಶುಲ್ಕ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.