
ಬೆಂಗಳೂರು: ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮದ ತಿದ್ದುಪಡಿಯಿಂದಾಗಿ ಸಿ ಮತ್ತು ಡಿ ವೃಂದದ ನೌಕರರಿಗೆ ಸಂಕಷ್ಟ ಎದುರಾಗಿದೆ. ನೌಕರರಿಗೆ ಸ್ವಂತ ಕೋರಿಕೆಯ ಮೇಲೆ ವರ್ಗಾವಣೆಗೆ ಇದ್ದ ಅವಕಾಶವನ್ನು ಕಸಿದುಕೊಂಡಂತಾಗಿದ್ದು, ನೌಕರರ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಿಂದಿನಂತೆಯೇ ಸಿ ಮತ್ತು ಡಿ ದರ್ಜೆ ನೌಕರರನ್ನು ಒಂದು ಜೇಷ್ಠತಾ ಘಟಕದಿಂದ ಮತ್ತೊಂದು ಘಟಕದ ಸಮಾನ ಹುದ್ದೆಗೆ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆಗೊಳಿಸಲು ಇಲಾಖೆಯ ಮುಖ್ಯಸ್ಥರಿಗೆ ಇದ್ದ ಅಧಿಕಾರವನ್ನು ಮರು ಸ್ಥಾಪಿಸಬೇಕೆಂದು ಒತ್ತಾಯಿಸಲಾಗಿದ್ದು, ತಿದ್ದುಪಡಿ ನಿಯಮ ಹಿಂಪಡೆಯಬೇಕೆಂದು ನೌಕರರು ಆಗ್ರಹಿಸಿದ್ದಾರೆ.
ಸಿ ಮತ್ತು ಡಿ ದರ್ಜೆ ನೌಕರರಿಗೆ ವರ್ಗಾವಣೆ ಸಂಕಷ್ಟ ಎದುರಾಗಿದ್ದು, ಸ್ವಂತ ಕೋರಿಕೆಯ ಅಂತರ ಜಿಲ್ಲಾ ಅಂತರ ವಲಯ ಮತ್ತು ಕಮಿಷನರೇಟ್ ವರ್ಗಾವಣೆಗಿದ್ದ ಅವಕಾಶವನ್ನು ಕಸಿದುಕೊಂಡಂತಾಗಿದೆ.
ಈ ತಿದ್ದುಪಡಿ ನಿಯಮದಿಂದ ಸಿ ಮತ್ತು ಡಿ ದರ್ಜೆ ನೌಕರರಿಗೆ ಕೋರಿಕೆ ವರ್ಗಾವಣೆ ಇಲ್ಲವಾಗಿದೆ. ಸೇವಾವಧಿ ಪೂರ್ಣ ಸಾಮಾನ್ಯ ವರ್ಗಾವಣೆ ಅನ್ವಯವೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಸರಿಯಾಗಿ ರಜೆ ಸಿಗುವುದಿಲ್ಲ. ಹೀಗಾಗಿ ಕುಟುಂಬದ ಯೋಗಕ್ಷೇಮ ನೋಡಲು ಆಗುವುದಿಲ್ಲ. ಕೌಟುಂಬಿಕ ಸಮಸ್ಯೆಗಳು ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಪರದಾಡಬೇಕಾಗುತ್ತದೆ. ಒತ್ತಡದಲ್ಲೇ ಕೆಲಸ ಮಾಡಬೇಕಾಗುತ್ತದೆ. ಪತಿ-ಪತ್ನಿ ಸೇವಾ ಅವಧಿ ಪೂರ್ತಿ ಒಂದೇ ಜಿಲ್ಲೆ ಅಥವಾ ವಲಯದಲ್ಲಿ ಕೆಲಸ ಮಾಡಲು ಅವಕಾಶವಿಲ್ಲದಂತಾಗುತ್ತದೆ ಎಂದು ಹೇಳಲಾಗಿದೆ.