ಬೆಂಗಳೂರು: ವೇತನ ಹೆಚ್ಚಳ, ಒಪಿಎಸ್ ಮರು ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ ಕೈಗೊಂಡಿದ್ದು, ವಿವಿಧ ಇಲಾಖೆಗಳ ನೌಕರರು, ಸಿಬ್ಬಂದಿ ಬೆಂಬಲ ಸೂಚಿಸಿ ಕರ್ತವ್ಯಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ.
ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ, ಪೌರಕಾರ್ಮಿಕರು, ಕಂದಾಯ ಇಲಾಖೆ ನೌಕರರು, ನಿವೃತ್ತ ನೌಕರರು ಸೇರಿದಂತೆ ವಿವಿಧ ಇಲಾಖೆಗಳ ನೌಕರರು, ನಿವೃತ್ತ ನೌಕರರ ಸಂಘದಿಂದ ಬೆಂಬಲ ನೀಡಲಾಗಿದೆ.
ಮುಷ್ಕರಕ್ಕೆ ಸರ್ಕಾರಿ ವೈದ್ಯಾಧಿಕಾರಿಗಳು ಬೆಂಬಲ ನೀಡಿದ್ದು, ಇಂದು ಆಸ್ಪತ್ರೆಗಳಲ್ಲಿ ಯಾವುದೇ ಒಪಿಡಿ ಸೇವೆ ಇರುವುದಿಲ್ಲ. ಕೇವಲ ತುರ್ತು ಸೇವೆಗಳು ಮಾತ್ರ ಸಿಗಲಿವೆ. ಅಪಘಾತ, ಹೆರಿಗೆ ಸೇರಿದಂತೆ ತುರ್ತು ಸೇವೆಗಳು ಮಾತ್ರ ಇರುತ್ತವೆ. ಬೆಂಗಳೂರಿನಲ್ಲಿ ಮೂರು ಪ್ರಮುಖ ಆಸ್ಪತ್ರೆ, 105 ಪಿ.ಎಸ್.ಸಿ. ಸೆಂಟರ್ ಗಳು, 19 ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳ ಒಪಿಡಿ ಸೇವೆ ಬಂದ್ ಮಾಡಲಾಗುವುದು. ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ ದೊರೆ ಮಾಹಿತಿ ನೀಡಿದ್ದಾರೆ.
ಸರ್ಕಾರಿ ನೌಕರರ ಮುಷ್ಕರಕ್ಕೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಬೆಂಬಲ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮುಷ್ಕರ ಬೆಂಬಲಿಸಿ ಕರ್ತವ್ಯಕ್ಕೆ ಗೈರು ಹಾಜರಾಗಲು ನಿರ್ಧರಿಸಿದೆ.